ಸಾರಿಗೆ ಸಿಬ್ಬಂದಿಗೆ ಮಾರ್ಚ್‌ ವೇತನ ನೀಡದಿದ್ದರೆ ಡಿಪೋ ಮ್ಯಾನೇಜರ್‌ಗಳ ವಿರುದ್ಧ ರಾಜ್ಯಾದ್ಯಂತ ದೂರು: ಕೋಡಿಹಳ್ಳಿ

posted in: ರಾಜ್ಯ | 0

ಬೆಂಗಳೂರು: ಸಾರಿಗೆ ನೌಕರರು ಇನ್ನೊಂದು ತಿಂಗಳು ಸತ್ಯಾಗ್ರಹ ಮಾಡಿದರೂ ನಾವು ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳುತ್ತಿರುವುದು ದೌರ್ಜನ್ಯದ ಪರಮಾವಧಿ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರಿಗೆ ಯುಗಾದಿ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸರಕಾರ ನೌಕರರಿಗೆ ವೇತನ ನೀಡದೇ ಸತಾಯಿಸುತ್ತಿದೆ. ವೇತನ ನೀಡುವುದೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಮಾರ್ಚ್‌ ತಿಂಗಳ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್‌ಗಳ ವಿರುದ್ಧ ರಾಜ್ಯದಾದ್ಯಂತ ಪೊಲೀಸ್‌ ಠಾಣೆಗಳಿಗೆ ದೂರು ನೀಡಲಾಗುತ್ತಿದೆ. ಸಾರಿಗೆ ನೌಕರ ತಿಪ್ಪೇಸ್ವಾಮಿ ಈ ಬಗ್ಗೆ ಮೊದಲ ದೂರನ್ನು ನೀಡಲಿದ್ದಾರೆ. ಬಳಿಕ ರಾಜ್ಯದ ಎಲ್ಲೆಡೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ, ಚಾಲಕರ ಮೂಲಕ ಬಸ್‌ ಓಡಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಈ ರೀತಿ ಎಷ್ಟೇ ಪ್ರಯತ್ನ ಮಾಡಿದರೂ ಅದು ಸಫಲವಾಗುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಲಿ. 6 ನೇ ವೇತನ ಆಯೋಗದ ಜಾರಿ ನಮ್ಮ ಬೇಡಿಕೆಯಾಗಿದ್ದಿಲ್ಲ. ರಾಜ್ಯ ಸರಕಾರವೇ ನೀಡಿದ ವಾಗ್ದಾನವಾಗಿದೆ. ಆಗ ಮಾತು ಕೊಟ್ಟು ಈಗ ಮೊಂಡುವಾದ ಮಾಡುವುದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ