ಮಂಗಳೂರು ದೋಣಿ ದುರಂತ: ಮೂವರು ಮೀನುಗಾರರ ಶವ ಪತ್ತೆ

posted in: ರಾಜ್ಯ | 0

ಮಂಗಳೂರು: ಹಡಗು ಮತ್ತು ಮೀನುಗಾರಿಕೆ ದೋಣಿ ನಡುವೆ ಸಮುದ್ರದ ಮಧ್ಯದಲ್ಲಿ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿದ ಮೂವರು ಮೀನುಗಾರರ ಮೃತದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ.
ಮೃತಪಟ್ಟವರಲ್ಲಿ ಇಬ್ಬರು ತಮಿಳುನಾಡಿನ ಕೊಲಾಚೆಲ್ ಮೂಲದವರಾಗಿದ್ದರೆ, ಇನ್ನೊಬ್ಬರು ಪಶ್ಚಿಮ ಬಂಗಾಳದವರು. ಶವಗಳನ್ನು ಇಲ್ಲಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದ ಇಬ್ಬರು ಮೀನುಗಾರರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೋಣಿಯಲ್ಲಿದ್ದ ತಮಿಳುನಾಡಿನ ಆರು ಮಂದಿ ಮತ್ತು ಬಂಗಾಳದ ಮೂವರು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ.
ಎಪ್ರಿಲ್ 11 ರಂದು ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಬೇಪೋರ್‌ನಿಂದ ರಾತ್ರಿ 11 ಗಂಟೆಗೆ ಹೊರಟ ಮೀನುಗಾರಿಕಾ ದೋಣಿಯಲ್ಲಿ 14 ಮೀನುಗಾರರು ಇದ್ದರು. ಮಂಗಳೂರು ಕರಾವಳಿಯಿಂದ 43 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮಂಗಳವಾರ ನಸುಕಿನ ಜಾವ 2.30 ಗಂಟೆಗೆ ಸಿಂಗಾಪುರ ಮೂಲದ ಹಡಗಿಗೆ ದೋಣಿ ಡಿಕ್ಕಿ ಹೊಡೆದಿದೆ.
ಕೋಸ್ಟ್ ಗಾರ್ಡ್ ಹಡಗುಗಳಾದ ರಾಜ್‌ದೂತ್, ಅಮರ್ತ್ಯ ಮತ್ತು ಡಾರ್ನಿಯರ್ ವಿಮಾನಗಳು ಕಾಣೆಯಾದ ಮೀನುಗಾರರ ಹುಡುಕಾಟವನ್ನು ಮುಂದುವರಿಸಿವೆ. ಇದೇ ವೇಳೆ ನೌಕಾಪಡೆಯ ಸಹಾಯವನ್ನೂ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ