ಕೋವಿಡ್‌ ಚಿಕಿತ್ಸೆಗೆ ಬೆಡ್‌ ನೀಡದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವರ ಖಡಕ್‌ ಎಚ್ಚರಿಕೆ

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಬೆಡ್ ನೀಡುತ್ತಿಲ್ಲ. ಇದು ಮುಂದುವರಿದರೆ ಕಠಿಣ‌ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಕಳೆದ 15 ದಿನಗಳಲ್ಲಿ ಕೇವಲ 15-20% ಮಾತ್ರ ಬೆಡ್ ನೀಡುತ್ತಿವೆ. ಇದು ಮುಂದುವರಿದರೆ ಕಳೆದ ವರ್ಷದಂತೆ ಖಾಸಗಿ ಆಸ್ಪತ್ರೆ‌ಗಳ ಮೇಲೆ‌ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ‌ ಆಗುವವರೆಗೆ ದಯವಿಟ್ಟು ಕಾಯಬೇಡಿ. ಕೋವಿಡ್ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿ. ಇಲ್ಲವಾದರೆ ಸರ್ಕಾರ ಸುಮ್ಮನೆ ಕೂಡ್ರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಖಾಸಗಿ ಹೋಟೆಲ್‌ಗಳಲ್ಲಿ‌ ಕೋವಿಡ್ ಆಸ್ಪತ್ರೆಗಳನ್ನ ಮಾಡುತ್ತೇವೆ. ಗಂಭೀರ ಸ್ವರೂಪದ ರೋಗಿಗಳಿಗೆ ಆಸ್ಪತ್ರೆಯಲ್ಲಿ ದಾಖಲು‌ ಮಾಡುತ್ತೇವೆ. ರಾಜೀವ್ ಗಾಂಧಿ ಆಸ್ಪತ್ರೆಯನ್ನು ಸಂಪೂರ್ಣ ಐಎಲ್‌ಐ ಮತ್ತು ಸಾರಿ ಕೇಸ್‌ಗಳಿಗೆ ಮೀಸಲಿರಿಸಲಾಗಿದೆ. ಬೆಂಗಳೂರಿನಲ್ಲಿ ಎಲ್ಲೇ ಐಎಲ್‌ಐ, ಸಾರಿ ಕೇಸ್ ಇದ್ದರೂ ಇದೇ ಆಸ್ಪತ್ರೆಗೆ ಹೋಗಬೇಕು. ಇನ್ನೆರಡು ದಿನಗಳಲ್ಲಿ ವಿಕ್ಟೋರಿಯಾದಲ್ಲಿ 500 ಹಾಸಿಗೆಗಳನ್ನು ಕೋವಿಡ್​ಗೆ ಹೆಚ್ಚುವರಿಯಾಗಿ ಮೀಸಲಿರಿಸಲಾಗುವುದು. ಬೌರಿಂಗ್ ಆಸ್ಪತ್ರೆಯಲ್ಲಿ 300, ಚರಕ‌ದಲ್ಲಿ‌ 150, ಘೋಶಾ ಆಸ್ಪತ್ರೆಯಲ್ಲಿ 100, ಕೆ ಸಿ ಜನರಲ್ ಆಸ್ಪತ್ರೆಗಳಲ್ಲಿ 100 ಐಸಿಯು ಹಾಸಿಗೆಗಳು, ಸಿ.ವಿ.ರಾಮನ್ ಆಸ್ಪತ್ರೆ, ಜಯನಗರ ಆಸ್ಪತ್ರೆಗಳಲ್ಲೂ ಕೋವಿಡ್​ಗೆ ಹಾಸಿಗೆಗಳನ್ನು ಹೆಚ್ಚಿಸುತ್ತಿದ್ದೇವೆ ಎಂದರು.
ತಾಂತ್ರಿಕ‌ ಸಲಹಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ವೈಜ್ಞಾನಿಕವಾಗಿ ನಿಯಂತ್ರಣಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.
ಖಾಸಗಿ ಆಂಬುಲೆನ್‌ ನವರು ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಹೆಣದ ‌ಮೇಲೆ ಶೋಷಣೆ ಸರಿಯಲ್ಲ. ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement