ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬೇಡಿ: ಸರ್ಕಾರಕ್ಕೆ ಬಿಜೆಪಿ ಶಾಸಕ ರಘುಪತಿ ಭಟ್ ಮನವಿ

posted in: ರಾಜ್ಯ | 0

ಉಡುಪಿ: ಕೋವಿಡ್ ಪರಿಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಧಾರ್ಮಿಕ ಕೇಂದ್ರಗಳೇ ಹೆಚ್ಚಿರುವ ಜಿಲ್ಲೆ ಉಡುಪಿ. ಜನರ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡಬೇಡಿ” ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಹೂರ್ತ ನಿಗದಿಯಾಗಿ ಜನ ತಯಾರಿ ನಡೆಸಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ ಎಂದು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ನಾನು ಆಡಳಿತ ಪಕ್ಷದ ಸದಸ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವುದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ. ಜನರ ಭಾವನೆಗಳಿಗೆ ಸ್ಪಂದಿಸಿ ಆದೇಶವನ್ನು ತಕ್ಷಣ ವಾಪಸು ಪಡೆಯಬೇಕು ಎಂದು ಮನವಿ ಮಾಡಿದರು.
ಕೋವಿಡ್ ನಿಯಮಾವಳಿಗಳನ್ನು ರೂಪಿಸಿ, ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಭಾಗವಹಿಸುವ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಿ. ಆದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಬೇಡ, ರಾಜಕೀಯ ಕಾರ್ಯಕ್ರಮಗಳು ಅನಿವಾರ್ಯವಲ್ಲ, ಆದರೆ ಅವಕಾಶ ಕೊಟ್ಟಿದ್ದೇವೆ ಎಂದರು.
ಕರಾವಳಿ ಜೀವನಪದ್ಧತಿ ಅರ್ಥಮಾಡಿಕೊಳ್ಳಿ. ಧಾರ್ಮಿಕ ಕಾರ್ಯಕ್ರಮಕ್ಕೆ ನಿಯಂತ್ರಣ ಹೇರಿ, ಆದರೆ ಅವಕಾಶ ಕೊಡಿ. ಹಿಂದುಳಿದ ಸಮುದಾಯದವರೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದುಡಿಯುತ್ತಾರೆ. ಬಡವರಿಗೆ ಇದರಿಂದ ಆರ್ಥಿಕ ಹೊಡೆತ ಬೀಳುತ್ತದೆ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ