ವಿದ್ವಾನ್‌ ಉಮಾಕಾಂತ ಭಟ್ಟರಿಗೆ ಶೃಂಗೇರಿ ಜಗದ್ಗುರು ಪುರಸ್ಕಾರ

ಶಿರಸಿ: ನಾಡಿನ ಹೆಸರಾಂತ ವಿದ್ವಾಂಸ, ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವಾಗ್ಮಿ, ಲೇಖಕ ವಿದ್ವಾನ್‌ ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಶೃಂಗೇರಿ ಜಗದ್ಗುರು ಪೀಠಾಧಿಪತಿ ಶ್ರೀಭಾರತೀತೀರ್ಥ ಪುರಸ್ಕಾರವನ್ನು ಪ್ರಕಟಿಸಲಾಗಿದೆ.
ಸಂಸ್ಕೃತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಮಾಡಿದ ದೇಶದ ಎಪ್ಪತ್ತು ವಿದ್ವಾಂಸರಿಗೆ ನೀಡುವ ಪುರಸ್ಕಾರ ಇದಾಗಿದ್ದು, ಅವರಲ್ಲಿ ಉಮಾಕಾಂತ ಭಟ್ಟರು ಒಬ್ಬರು. ಪುರಸ್ಕಾರವು ಒಂದು ಲಕ್ಷ. ರೂ. ನಗದು, ಪುರಸ್ಕಾರ ಪತ್ರ, ಸ್ಮರಣಿಕೆ, ಶಾಲು ಒಳಗೊಂಡಿದೆ.
ಪ್ರವಚನ, ಯಕ್ಷಗಾನ ತಾಳಮದ್ದಲೆ ಅರ್ಥಧಾರಿಕೆಯಲ್ಲಿ ರಾಜ್ಯದಲ್ಲಿ ಖ್ಯಾತನಾಮರು. ಪ್ರಾಚೀನ ನ್ಯಾಯ ಶಾಸ್ತ್ರ ಹಾಗೂ ನವೀನ ನ್ಯಾಯ ಶಾಸ್ತ್ರಗಳ ಪಂಡಿತರು. ವಿಶ್ವದ ಏಕೈಕ ಛಂಧೋಬದ್ದ ಸಂಸ್ಕೃತ ಪತ್ರಿಕೆಯ ಸ್ಥಾಪಕರು.
ಏ.೧೯ರಂದು ಶೃಂಗೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಶೃಂಗೇರಿ ಜಗದ್ಗುರು ಪೀಠಾಧಿಪತಿ ಶ್ರೀಭಾರತೀತೀರ್ಥ ಮಹಾಸ್ವಾಮೀಜಿಗಳ ೭೧ನೇ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ದೇಶದಲ್ಲಿ ಅಪಾರ ಸಾಧನೆ ಮಾಡಿದ ೭೦ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆರೇಕೈ ಉಮಾಕಾಂತ ಭಟ್ಟ ಅವರು ಮಂಡ್ಯ ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. ಬನ್ನಂಜೆ ಪ್ರಶಸ್ತಿ, ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಗಳೂ ಸೇರಿದಂತೆ ಅನೇಕ ಸನ್ಮಾನ ಹಾಗೂ ಗೌರವಗಳಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

4 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement