ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ನಿಧನ

posted in: ರಾಜ್ಯ | 0

ಸಿದ್ದಾಪುರ; ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ , ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಪ್ರಸಂಗಕರ್ತ,ಅನೇಕ ಕೃತಿಗಳ ರಚನೆಕಾರ ಎಂ. ಎ. ಹೆಗಡೆ (ಮಹಾಬಲೇಶ್ವರ ಅಣ್ಣಪ್ಪ ಹೆಗಡೆ) ಭಾನುವಾರ ನಿಧನರಾದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು. ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು.
ಇವರು ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ೧೯೪೮ ಜುಲೈ ೩ ಜನಿಸಿದ್ದರು. ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ. ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ (೧೯೭೧) ಪೂರೈಸಿ ಅನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಹಾಗೂ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ೧೯೭೩ರಿಂದ ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ದಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಚಾರ್ಯರಾಗಿ ೨೦೦೬ರಲ್ಲಿ ನಿವೃತರಾಗಿದ್ದರು.
ಸೀತಾವಿಯೋಗ, ರಾಜಾಕರಂಧಮ, ವಿಜಯೀ ವಿಶ್ರುತ, ಧರ್ಮದುರಂತವೇ ಮುಂತಾಗಿ ಇಪ್ಪತ್ತಕ್ಕೂ ಮಿಕ್ಕು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಇವರ ಸೀತಾವಿಯೋಗ ಅಥವಾ ಲವಕುಶವು ಯಕ್ಷಗಾನದ ಅತ್ಯಂತ ಜನಪ್ರಿಯ ಪ್ರಸಂಗಗಳಲ್ಲೊಂದು. ಬಡಗುತಿಟ್ಟಿನಲ್ಲಿ ಅದನ್ನು ಆಡದವರೇ ಇಲ್ಲವೆನ್ನಬಹುದು. ಯಕ್ಷಗಾನದ ಪ್ರಥಮ ಕೃತಿಯೆನ್ನಬಹುದಾದ ೧೧ನೇ ಶತಮಾನದ್ದು ಎನ್ನಲಾದ ಆದಿಪರ್ವವನ್ನು ಸಂಪಾದಿಸಿದ್ದರು. ಅನೇಕ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅದನ್ನು ಪ್ರಕಟಿಸಲು ಕಾರಣರಾಗಿದ್ದಾರೆ. ಭಾರತೀಯ ಸಂಸ್ಕೃತಿ-ಕಲೆ ಬಗೆಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧಕಾರರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಶಿರಸಿಯಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು. ಯಕ್ಷಗಾನ ಸೇವೆಗಾಗಿ ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ,ಚಿಟ್ಟಾಣಿ ಪ್ರಶಸ್ತಿ ಮುಂತಾದವು ಸಂದಿವೆ. ಇವರ ಸಿದ್ಧಾಂತಬಿಂದು ಗ್ರಂಥಕ್ಕೆ ಪ್ರೊ.ಎಂ. ಹಿರಿಯಣ್ಣ ಪುರಸ್ಕಾರ, ಭಾರತೀಯ ದರ್ಶನಗಳು ಮತ್ತು ಭಾಷೆ ಎಂಬ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಅವರು ಸಾಹಿತ್ಯದಲ್ಲಿಯೂ ಅಪಾರ ಕೃಷಿ ಮಾಡಿದವರು. ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಅವರ ಕೃತಿಗಳು:
* ಬ್ರಹ್ಮಸೂತ್ರ ಚತುಃಸೂತ್ರಿ-ಶ್ರೀಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಗಳ
ಅನುವಾದ ಹಾಗೂ ವಿಸ್ತಾರವಾದ ಟಿಪ್ಪಣಿ.
* ಅಲಂಕಾರತತ್ತ್ವ ಎಂಬುದು ಕನ್ನಡದಲ್ಲಿ ಉಪಮಾ,ರೂಪಕ ಇತ್ಯಾದಿ ಅಲಂಕಾರಗಳನ್ನು ವಿಸ್ತಾರವಾಗಿ ವಿವೇಚಿಸಿದ ಏಕಮಾತ್ರ ಗ್ರಂಥ. ಇದರಲ್ಲಿ ಹಳೆಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳಿಂದ
ಉದಾಹರಣೆಗಳನ್ನು ಕೊಟ್ಟು ಪ್ರಾಚೀನ ಆಲಂಕಾರಿಕರ ತತ್ತ್ವಗಳು ಇಂದಿಗೂ ಹೇಗೆ ಪ್ರಸ್ತುತವಾಗಿವೆಯೆಂಬುದನ್ನು ನಿರೂಪಿಸಲಾಗಿದೆ. ಇದನ್ನೊಂದು ಆಕರ ಗ್ರಂಥವೆಂದು ಕರ್ನಾಟಕ ವಿಶ್ವವಿದ್ಯಾಲಯವು ಮನ್ನಿಸಿದೆ.
*.ಭಾರತೀಯ ತತ್ತ್ವಶಾಸ್ತ್ರ ಪ್ರವೇಶ – ಭಾರತೀಯ ದರ್ಶನಗಳ ವಿಚಾರಧಾರೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಗ್ರಂಥ. ಡಾ.ಎಂ.ಪ್ರಭಾಕರ ಜೋಶಿ ಸಹಲೇಖಕರು.
* ಕುಮಾರಿಲಭಟ್ಟ – ಭಾರತದ ಮಹಾನ್ ತಾರ್ಕಿಕರಲ್ಲೊಬ್ಬನಾದ ಮೀಮಾಂಸಾಶಾಸ್ತ್ರದ ಮೂರ್ಧನ್ಯನೆನಿಸಿದ ಕುಮಾರಿಲಭಟ್ಟನ ಶ್ಲೋಕವಾರ್ತಿಕದ ಒಂದು ಅಧ್ಯಾಯದ ಅನುವಾದ, ಟಿಪ್ಪಣಿ ಹಾಗೂ ಸುದೀರ್ಘವಾದ ಪೀಠಿಕೆಯೊಂದಿಗೆ ಪ್ರಕಟಗೊಂದ ಈ ಗ್ರಂಥವು ಕನ್ನಡ ಜಗತ್ತಿಗೆ
ಕುಮಾರಿಲನನ್ನು ಪರಿಚಯಿಸುವ ಕೃತಿ. ಡಾ.ಎಂ.ಪ್ರಭಾಕರರ ಜೋಶಿಯವರರು ಸಹಲೇಖಕರಾಗಿರುವ
ಈ ಕೃತಿ ಅಕ್ಷರ ಚಿಂತನಮಾಲೆಯಲ್ಲಿ ಪ್ರಕಟಗೊಂಡಿದೆ.
*.ಶಬ್ದ ಮತ್ತು ಜಗತ್ತು – ಪ್ರೊ.ಬಿ.ಕೆ.ಮತಿಲಾಲ ಅವರ ಮೂಲಕೃತಿಯ ಕನ್ನಡ ಅನುವಾದ. ಭಾಷಾತತ್ತ್ವಶಾಸ್ತ್ರದ ವಿವಿಧ ಸಮಸ್ಯೆಗಳನ್ನು ಚರ್ಚಿಸುವಗ್ರಂಥ.
*.ಭಾರತೀಯ ದರ್ಶನಗಳು ಮತ್ತು ಭಾಷೆ – ಭಾಷೆಯ ಬಗೆಗೆ ಭಾರತೀಯ ದರ್ಶನಗಳಲ್ಲಿ ನಡೆದ ಮುಖ್ಯವಾದ ವಾದ-ವಿವಾದಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುವ ಗ್ರಂಥ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.
* ಅಭಿನಯದರ್ಪಣ -ನಂದಿಕೇಶ್ವರನ ಅಭಿನಯ ದರ್ಪಣದ ಅನುವಾದ. ಸಂಸ್ಕೃತದಲ್ಲಿ ರಚಿತವಾದ ಪ್ರಸಿದ್ಧ ಕೃತಿಯನ್ನು ವಿವರವಾದ ಟಿಪ್ಪಣಿಗಳೊಂದಿಗೆ ಅನುವಾದಿಸಲಾಗಿದೆ.
*.ಧ್ವನ್ಯಾಲೋಕ ಮತ್ತು ಲೋಚನ ಆನಂದವರ್ಧನನ ಪ್ರಸಿದ್ಧಕೃತಿಯನ್ನು ಮೂಲ, ವೃತ್ತಿಗಳ ಜೊತೆಗೆ ಅಭಿನವಗುಪ್ತನ ಲೋಚನವೆಂಬ ವ್ಯಾಖ್ಯಾನದೊಂದಿಗೆ ಅನುವಾದಿಸಲಾಗಿದೆ. ವಿವರವಾದ ಟಿಪ್ಪಣಿಗಳನ್ನು ಕೊಡಲಾಗಿದೆ.ಇದು ಅಲಂಕಾರಶಾಸ್ತ್ರದ ಅಧ್ಯಯನಕ್ಕೆ ಮಹತ್ವದ ಕೊಡುಗೆಯೆನಿಸಿದೆ.
* ಭಗವದ್ಭಕ್ತಿರಸಾಯನಮ್ ಮಧುಸೂದನ ಸರಸ್ವತಿಯವರ ಕೃತಿ. ಭಕ್ತಿಯು ಒಂದು ರಸವೆಂದು ಸಿದ್ಧಪಡಿಸುವ ಗ್ರಂಥ.ಅದನ್ನು ವ್ಯಾಖ್ಯಾನಸಹಿತವಾಗಿ ಕನ್ನಡಕ್ಕೆ ಅನುವಾದಿಸಿದೆ.
*.ಸಿದ್ಧಾಂತ ಬಿಂದು ಮಧುಸೂದನ ಸರಸ್ವತಿಯವರ ಮತ್ತೊಂದು ಪ್ರೌಢ ಗ್ರಂಥ. ಅದನ್ನು ವಿಸ್ತಾರವಾದ ವಿವರಣೆಯೊಂದಿಗೆ ಅನುವಾದಿಸಿದ್ದಾರೆ. ಈ ಅನುವಾದಕ್ಕೆ ಸಂಸ್ಕೃತ ವಿಶ್ವವಿದ್ಯಾಲಯವು ಅತ್ಯುತ್ತಮ ಅನುವಾದಕ್ಕೆ ಕೊಡಲಾಗುವ ಪ್ರೊ. ಎಂ. ಹಿರಿಯಣ್ಣ ಪುರಸ್ಕಾರ ನೀಡಿದೆ.
*.ಪರಮಾನಂದ ಸುಧಾ – ಶಂಕರಾಚಾರ್ಯರ ಬ್ರಹ್ಮಸೂತ್ರದ ನಾಲ್ಕು ಸೂತ್ರಗಳ ಭಾಷ್ಯದ ಮೇಲಿನ ವಿಸ್ತಾರವಾದ ವ್ಯಾಖ್ಯಾನ
*.ಗೀತಾಗೂಢಾರ್ಥ ದೀಪಿಕಾ ಮಧುಸೂದನ ಸರಸ್ವತಿಯವರ ಆಚಾರ್ಯ ಕೃತಿಯೆನಿಸಿದ ಭಗವದ್ಗೀತೆಯ ಮೇಲಿನ ವ್ಯಾಖ್ಯಾನದ ಕನ್ನಡ ಅನುವಾದ.
*.ಸೌಂದರ್ಯಲಹರಿ ಮತ್ತು ಸಮಾಜ -ಶಂಕರಾಚಾರ್ಯರ ಸೌಂದರ್ಯಹರಿಯ ಮೇಲಿನ ಕೃತಿ.
*.ಪ್ರಮಾಣಪರಿಚಯ -ಪ್ರತ್ಯಕ್ಷ, ಅನುಮಾನ, ಶಬ್ದವೇ ಮುಂತಾದ ಪ್ರಮಾಣಗಳ ಸ್ವರೂಪವನ್ನು ಭಾರತೀಯದರ್ಶನಗಳು ವಿವೇಚಿಸಿದ ಬಗೆಯನ್ನು ವಿವರಿಸುವ ಕೃತಿ. ದರ್ಶನಶಾಸ್ತ್ರಗಳ ಅಧ್ಯಯನಕ್ಕೆ ಪೂರಕ ಕೃತಿ.
* .ಹಿಂದೂ ಸಂಸ್ಕಾರಗಳು ವೇದೋಕ್ತವಾದ ಷೋಡಶಸಂಸ್ಕಾರಗಳ ಇತಿಹಾಸ,ಅರ್ಥವತ್ತತೆಯೇ ಮುಂತಾದವುಗಳನ್ನು ವಿವೇಚಿಸುವ ಕೃತಿ. ಮುದ್ರಣಗೊಂಡು ವರ್ಷವಾಗುವುದರೊಳಗೆ ದ್ವಿತೀಯ ಮುದ್ರಣಕ್ಕೆ ಅಣಿಯಾದ ಜನಪ್ರಿಯ ಕೃತಿ.
*.ಕೆರೆಮನೆ ಶಂಭು ಹೆಗಡೆ ಯಕ್ಷಗಾನದ ಮೇರುಕಲಾವಿದ ಕೆರೆಮನೆ ಶಂಭು ಹೆಗಡೆಯವರ ಜೀವನ ಚರಿತ್ರೆ.
* ಮರೆಯಲಾಗದ ಮಹಾಬಲ – ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಪಾತ್ರಗಳನ್ನು ಕುರಿತು ರಚಿಸಿದ ಕೃತಿ.
*.ಉತ್ತರಕನ್ನಡಜಿಲ್ಲೆಯ ಯಕ್ಷಗಾನ ಸಾಹಿತ್ಯ ಚರಿತ್ರೆ ಅಚ್ಚಿನಲ್ಲಿದೆ. ಇವಲ್ಲದೆ ತಾಂಬೂಲ ಮಂಜರಿ,ಅಭಿನವಭಾರತಿ [ನಾಟ್ಯಶಾಸ್ತ್ರದ ಮೇಲಿನ ವ್ಯಾಖ್ಯಾನ],
ಬಾಲರಾಮಾಯಣ, ಪ್ರತ್ಯಭಿಜ್ಞಾವಿಮರ್ಶಿನೀ ಮುಂತಾದ ಗ್ರಂಥಗಳ ಅನುವಾದಗಳು ಪ್ರಕಟಗೊಳ್ಳಲಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಬೆಳಗಾವಿ ಸುವರ್ಣಸೌಧದ ಎದುರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ : ಸಿಎಂ ಬೊಮ್ಮಾಯಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement