ಬೆಂಗಳೂರು: ಕೊರೊನಾ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿಡದ 5 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ಬೆಂಗಳೂರಿನಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಿತ್ಯ ದಾಖಲಾಗುತ್ತಿವೆ. ಹೀಗಾಗಿ ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಆದರೆ ಕೊರೊನಾ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿಡದ ಕಾರಣಕೊಲಂಬಿಯಾ ಏಷ್ಯಾ, ಫೋರ್ಟಿಸ್, ಆಸ್ಟರ್ ಸಿಎಂಐ, ವಿಕ್ರಂ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಈ ಆಸ್ಪತ್ರೆಗಳು ಸೂಚನೆಯನ್ನು ಗಾಳಿಗೆ ತೂರಿದ್ದವು. ವಿಕ್ರಂ ಹಾಗೂ ಫೋರ್ಟಿಸ್ ಆಸ್ಪತ್ರೆಯಲ್ಲಿ 39 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆಂದು ಮೀಸಲಿಡಲಾಗಿದೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾದಲ್ಲಿ 30 ಹಾಸಿಗೆಗಳನ್ನು ಮೀಸಲಿಡಬೇಕಿತ್ತು ಆದರೆ ಕೇವಲ 15 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಹೀಗಾಗಿ ಈ ಆಸ್ಪತ್ರೆಗಳಿಗೆ ಭೇಟಿ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ನೋಟಿಸ್ ಜಾರಿ ಮಾಡಿದ್ದಾರೆ. ಒಂದೇ ದಿನ ರಾಜ್ಯದಲ್ಲಿ 19067 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 81 ಜನರು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 1161065 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 4603 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1014152 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 133543 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ