ಪಾಕಿಸ್ತಾನದಲ್ಲಿ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡ ಇಸ್ಲಾಂ ಮೂಲಭೂತವಾದಿ ಪಕ್ಷದ ಸದಸ್ಯರು..!

ಲಾಹೋರ್: ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳು ಪೊಲೀಸರನ್ನೇ ಒತ್ತೆಯಾಳಾಗಿರಿಸಿಕೊಂಡು ಸರ್ಕಾರಕ್ಕೇ ಸೆಡ್ಡು ಹೊಡೆದಿರುವ ಘಟನೆ ವರದಿಯಾಗಿದೆ.
ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳ ಪಕ್ಷ ‘ತೆಹ್ರೀಕ್‌-ಇ-ಲಬಾಯಿಕ್‌’ (ಟಿಎಲ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಹಿಂಸಾಚಾರ ನಡೆಸುತ್ತಿದ್ದು, ಈಗ ಅನೇಕ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಲು ಪಟ್ಟು ಹಿಡಿದಿದ್ದಾರೆ.
ಎರಡು ಇಂಧನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿರುವ ಟಿಎಲ್‌ಪಿ ಸದಸ್ಯರು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ. ಪೊಲೀಸರ ಮೇಲೆ ತೀವ್ರ ಕಲ್ಲುತೂರಾಟ ನಡೆಸಿ, ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ವರು ಹಿಂಸಾಚಾರದಲ್ಲಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಹೋರ್‌ ಪೊಲೀಸ್‌ ವಕ್ತಾರ ಆರಿಫ್‌ ರಾಣಾ ತಿಳಿಸಿದ್ದಾರೆ.
ವಾರದ ಹಿಂದೆ ಪಾಕಿಸ್ತಾನ ಸರ್ಕಾರವು ‘ತೆಹ್ರೀಕ್‌-ಇ-ಲಬಾಯಿಕ್‌’ (ಟಿಎಲ್‌ಪಿ) ಮೇಲೆ ನಿರ್ಬಂಧ ವಿಧಿಸಿದ್ದು, ಅದರ ಸದಸ್ಯರ ಯಾವುದೇ ಕೃತ್ಯಗಳನ್ನು ಪ್ರಸಾರ ಮಾಡದಂತೆ ಕೂಡ ಸ್ಥಳೀಯ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಹಿಂಸಾಚಾರ ಹತ್ತಿಕ್ಕಲು ಮತ್ತು ಟಿಎಲ್‌ಪಿ ವಶದಲ್ಲಿರುವ ಪೊಲೀಸ್‌ ಸಿಬ್ಬಂದಿ ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ಲಾಹೋರ್‌ ಪೊಲೀಸ್‌ ಇಲಾಖೆ ಟಿಎಲ್‌ಪಿ ಕೇಂದ್ರ ಕಚೇರಿ ಇರುವ ಲಾಹೋರ್‌ ಚೌಕ್‌ ಯಾತೀಮ್‌ಕಹಾನ್‌ ಪ್ರದೇಶದಲ್ಲಿ ಮೊಬೈಲ್‌, ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿ ನಿಷೇಧಾಜ್ಞೆ ವಿಧಿಸಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪೊಲೀಸರನ್ನು ಬಿಡುಗಡೆ ಮಾಡುವುದಿಲ್ಲ ಎಂದು ತೆಹ್ರೀಕ್‌-ಇ-ಲಬಾಯಿಕ್‌ ಪಕ್ಷದ ಸದಸ್ಯರು ಸರ್ಕಾರಕ್ಕೆ ತಿಳಿಸಿದ್ದಾರೆ.. ಟಿಎಲ್‌ಪಿ ಮುಖ್ಯಸ್ಥ ಸಾದ್‌ ರಿಜ್ವಿಯ ಬಂಧನದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿರುವ ಈ ಹಿಂಸಾಚಾರ ಹತ್ತಿಕ್ಕಲು ಅರೆಸೈನಿಕ ಪಡೆಯನ್ನು ಪೊಲೀಸರೊಂದಿಗೆ ನಿಯೋಜಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement