ಮೋಸ್ಟ್‌ ವಾಂಟೆಡ್‌ ನಕ್ಸಲ್ ನಾಯಕ ‘ಕೋಸಾ’ ಎನ್ಕೌಂಟರಿನಲ್ಲಿ ಹತ

ದಂತೇವಾಡ: ಛತ್ತೀಸ್ಗಡದ ಮೋಸ್ಟ್ ವಾಂಟೆಡ್‌ ನಕ್ಸಲ್ ನಾಯಕ ‘ಕೋಸಾ’ ಎಂಬಾತನನ್ನು ಭದ್ರತಾ ಪಡೆಗಳು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿವೆ.
ಮಂಗಳವಾರ ಬೆಳಿಗ್ಗೆ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಛತ್ತೀಸ್‌ಗಡದ ಮೋಸ್ಟ್ ವಾಂಟೆಡ್‌ ನಕ್ಸಲ್ ನಾಯಕ ‘ಕೋಸಾ’ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ , ‘ದಂತೇವಾಡ ಡಿಆರ್‌ಜಿ (ದಂತೇವಾಡ ಡಿಸ್ಟಿಕ್ಟ್ ರಿಸರ್ವ್ ಗಾರ್ಡ್)ಯೊಂದಿಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನೀಲವಾಯದ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಸತ್ತ ಮಾವೋವಾದಿ ನಕ್ಸಲ್ ನಾಯಕ ಕೋಸಾ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಈತ ಕಳೆದ 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ ಕೋಸಾ ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಇಲಾಖೆ ಘೋಷಣೆ ಮಾಡಿತ್ತು ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್, 3 ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್‌ಗಡದ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜುನಾಗಡದಲ್ಲಿ ನಕ್ಸಲರು ನಡೆಸಿದ್ದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ