ಕೋವಿಡ್ ಪರಿಸ್ಥಿತಿಯಲ್ಲಿ ರಾಜಕಾರಣ ಬೇಡ: ಡಿಕೆಶಿಗೆ ಸಚಿವ ಬೊಮ್ಮಾಯಿ ಸಲಹೆ

ಫೋಟೋ ಕ್ಯಾಪ್ಶನ್‌:ಸರ್ವ ಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಇಂದು ರಾಜಭವನದಲ್ಲಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ  ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್.‌

ಬೆಂಗಳೂರು: ಕೋವಿಡ್ ನಿಯಂತ್ರಣ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ.ಇಂಥ ಸಂದರ್ಭದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ  ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ರಾಜ್ಯಪಾಲರು ಕೋವಿಡ್ ವಿಚಾರದಲ್ಲಿ ಕರೆದಿರುವ ಸಭೆಯನ್ನು ರಾಜ್ಯಪಾಲರ ಆಡಳಿತಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದಾಗ ಈ ರೀತಿ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಜ್ಯಪಾಲರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು,  ಪ್ರತಿಪಕ್ಷಗಳ ನಾಯಕರು, ಉಭಯ  ಸದನಗಳ ಮುಖಂಡರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಗಳು ಕೇವಲ ಕರ್ನಾಟಕವಷ್ಠೇ ಅಲ್ಲ, ಎಲ್ಲ ರಾಜ್ಯಗಳ ರಾಜ್ಯಪಾಲರ ಜತೆಗೂ ಮಾತನಾಡಿದ್ದಾರೆ.  ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳ ರಾಜ್ಯಪಾಲರ ಜತೆಗೂ ಮಾತಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷದವರ ಜೊತೆ ಮಾತನಾಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಕೊರೊನಾ ಎದುರಿಸಿ ಎಂದು ಸಲಹೆ ನೀಡಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ.  ಅಲ್ಲಿಯ ರಾಜ್ಯಪಾಲರು ಸಭೆ ನಡೆಸಿದರೆ ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ ಎಂದು ಹೇಳುವುದಕ್ಕೆ ಆಗುತ್ತದೆಯಾ ? ಮಹಾರಾಷ್ಟ್ರದಲ್ಲಿ ಸಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ಪಾಲುದಾರ ಪಕ್ಷವಾಗಿದೆ. ಅಲ್ಲಿನ ರಾಜ್ಯಪಾಲರು ಸಭೆ ನಡೆಸಿದಾಕ್ಷಣ ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಲು ಸಾಧ್ಯವೇ?  ಹೀಗಾಗಿ ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ರಾಜಕಾರಣ ಮಾಡುವುದು ಮಾಡುವುದು ಸರಿಯಲ್ಲ ಎಂದರು.
ಕೋವಿಡ್ ಹೇಗೆ ಎದುರಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಇದನ್ನು ಡಿ.ಕೆ. ಶಿವಕುಮಾರ್ ಅರ್ಥಮಾಡಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಕೋವಿಡ್ ಎರಡನೆಯ ಅಲೆ ಅತಿ ವೇಗವಾಗಿ ಹರಡುತ್ತಿದೆ. ಕೇವಲ ಮೂರು ವಾರಗಳಲ್ಲಿ ಅತಿವೇಗವಾಗಿ ಹರಡಿದೆ.ಬೆಂಗಳೂರಲ್ಲಿ  ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರಿನಲ್ಲಿ ಸಮಸ್ಯೆ ಇದೆ. ಎಲ್ಲರೂ ಸೇರಿ ಕೆಲಸ ಮಾಡಿದರೂ ಕೋವಿಡ್ ಎದುರಿಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವಾಗ  ನೀವು ಇದರಲ್ಲಿ ತಪ್ಪು ಕಂಡುಹಿಡಿಯುವುದಕ್ಕೆ ಹೋಗಬೇಡಿ.  ಒಟ್ಟಾರೆ ಕೋವಿಡ್ ನಿಯಂತ್ರಿಸುವಲ್ಲಿ ಸಫಲತೆ ಕಾಣಬೇಕಾದರೆ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement