ಆಮ್ಲಜನಕ ಲಭ್ಯತೆ ಪುನರ್‌ ಪರಿಶೀಲನಾ ಸಭೆ: ಮೂರು ಸಲಹೆ ನೀಡಿದ ಪ್ರಧಾನಿ

ನವ ದೆಹಲಿ: ದೇಶದಾದ್ಯಂತ ಆಮ್ಲಜನಕದ ಪೂರೈಕೆ ಪುನರ್‌ ಪರಿಶೀಲಿಸಲು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಅದರ ಲಭ್ಯತೆ ಹೆಚ್ಚಳದ ಮಾರ್ಗೋಪಾಯಗಳ ಕುರಿತು ಚರ್ಚಿಸಿತು.
ಈ ಸಂದರ್ಭದಲ್ಲಿ ಆಮ್ಲಜನಕ ಲಭ್ಯತೆ ಹೆಚ್ಚಳಕ್ಕೆ ಪ್ರಧಾನಿ ಮೋದಿ ಮೂರು ಸಲಹೆಗಳನ್ನು ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ,ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ನೀತಿ ಆಯೋಗ ಹಾಗೂ ಇತರ ಸಚಿವಾಲಯಗಳ ಅಧಿಕಾರಿಗಳು ಭಾಗವಹಿಸಿದ್ದರು.
ಅಮ್ಲಜನಕದ ಉತ್ಪಾದನೆ ಹೆಚ್ಚಿಸುವುದು,ಅದರ ವೇಗ ಮತ್ತು ವಿತರಣೆ ಹೆಚ್ಚಿಸುವುದು ಹಾಗೂ ಆಸ್ಪತ್ರೆಗಳಿಗೆ ಆಮ್ಲಜನಕ ಬೆಂಬಲವನ್ನೊದಗಿಸಲು ವಿನೂತನ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಮೂರು ವಿಷಯಗಳನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ರಾಜ್ಯಗಳ ಆಮ್ಲಜನಕ ಅಗತ್ಯ ಗುರುತಿಸಲು ಮತ್ತು ಅವುಗಳಿಗೆ ಆಮ್ಲಜನಕದ ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಪ್ರಧಾನಿಗೆ ವಿವರಿಸಿದರು. 20 ರಾಜ್ಯಗಳಿಂದ ಪ್ರತಿದಿನ 6,785 ಟನ್ ದ್ರವ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆಯಿದ್ದು, ಕೇಂದ್ರದಿಂದ ಏಪ್ರಿಲ್‌ 21ರಿಂದ ಈ ರಾಜ್ಯಗಳಿಗೆ ಪ್ರತಿದಿನ 6,822 ಟನ್ ಹಂಚಿಕೆ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ರಾಜ್ಯಗಳಿಗೆ ಆಮ್ಲಜನಕ ಸುಗಮವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಪ್ರಧಾನಿ ಮೋದಿ, ವ್ಯತ್ಯಯವುಂಟಾದಲ್ಲಿ ಸ್ಥಳೀಯ ಆಡಳಿತವನ್ನು ಹೊಣೆಯಾಗಿಸುವ ಮಾತನ್ನಾಡಿದ್ದಾರೆ. ಆಮ್ಲಜನಕದ ಕಾಳ ದಾಸ್ತಾನು ವಿರುದ್ಧ ರಾಜ್ಯ ಸರಕಾರಗಳು ಕಠಿಣಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು.
ಆಮ್ಲಜನಕದ ಸಾಗಾಟಕ್ಕಾಗಿ ಟ್ಯಾಂಕರುಗಳ ಸಂಖ್ಯೆ ಹೆಚ್ಚಿಸಲೂ ಸರಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement