ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದಿನಾಂಕ ಏಪ್ರಿಲ್ 22ರಿಂದ ಮೇ 4ರ ವರೆಗೆ ರಾತ್ರಿ ಹಾಗೂ ವೀಕ್ ಎಂಡ್ ಕರ್ಪ್ಯೂ ಇರುವ ಎಲ್ಲ ಶಾಲಾ ಕಾಲೇಜುಗಳ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಆದೇಶದಲ್ಲಿ ದಿನಾಂಕ 22-04-2021ರಿಂದ ಎಲ್ಲ ಶಾಲಾ-ಕಾಲೇಜುಗಳನ್ನು ದಿನಾಂಕ 04-05-2021ರ ವರೆಗೆ ಮುಚ್ಚಲು ಆದೇಶಿಸಿದ್ದಾರೆ.
ಆದೇಶದಲ್ಲಿ ಮಹತ್ವದ ಅಂಶಗಳು..:
* ಕೇವಲ ಆನ್ ಲೈನ್, ದೂರಸಂಪರ್ಕ ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದ್ವಿತೀಯ ಪಿಯು ತರಗತಿಗಳ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ, ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಪತ್ರಿಕೆಗಳನ್ನಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
* ಪ್ರೀ-ರೆಕಾರ್ಡೆಡ್ ವಿಡಿಯೋ ತರಗತಿಗಳನ್ನು ಮುಂದುವರೆಸಲಾಗುತ್ತದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಸೂಚಿಸುವುದು
*ವಿದ್ಯಾರ್ಥಿಗಳಿಗೆ ಯಾವುದೇ ವಿಷಯಗಳಲ್ಲಿ ಸಮಸ್ಯೆ, ಸಂಶಗಳು ಬಂದರೇ ತಮ್ಮ ಕಾಲೇಜಿನ ಸಂಬಂಧಪಟ್ಟ ವಿಷಯಗಳ ಉಪನ್ಯಾಸಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
*ದಿನಾಂಕ 28-04-2021 ರಿಂದ 18-05-2021ರ ವರೆಗೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಹಾಗೂ ದಿನಾಂಕ 24-05-2021 ರಿಂದ ತಾತ್ವಿಕ ಪರೀಕ್ಷೆಗಳನ್ನು ಇಲಾಖೆಯು ನಡೆಸುವುದರಿಂದ ಪರೀಕ್ಷಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಎಲ್ಲಾ ಕಾಲೇಜುಗಳಲ್ಲಿ ಶೇ.50ರಷ್ಟು ಉಪನ್ಯಾಸಕರು ಕಡ್ಡಾಯವಾಗಿ ಹಾಜರಾಗುವುದು. ಪ್ರಾಂಶುಪಾಲರು ಈ ಬಗ್ಗೆ ಸರಿಯಾದ ವೇಳಾಪಟ್ಟಿ ತಯಾರಿಸಿ, ಉಪನ್ಯಾಸಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು.
*ಈ ಸುತ್ತೋಲೆಯು ತಾತ್ಕಾಲಿಕವಾಗಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ರಾಜ್ಯ ಸರ್ಕಾರ, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಹಾಗೂ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ