ಬೆಂಗಳೂರು:ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರವು ಮೇ 4ರ ವರೆಗೆ ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಜಾರಿ ಮಾಡಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ವೀಕೆಂಡ್ ಕರ್ಫ್ಯೂ ಇಂದು (ಶುಕ್ರವಾರ) ರಾತ್ರಿಯಿಂದಲೇ ಜಾರಿಗೆ ಬರಲಿದ್ದು ಸೋಮವಾರ ಬೆಳಿಗ್ಗೆ 6 ರ ವರೆಗೂ ಇರಲಿದೆ.
ಹೀಗಾಗಿ ನಾಳೆ ಮತ್ತು ನಾಡಿದ್ದು ಯಾವ್ಯಾವುದು ಲಭ್ಯವಿರುತ್ತದೆ ಹಾಗೂ ಯಾವ್ಯಾವುದು ಇರುವುದಿಲ್ಲ ಎಂಬ ಬಗ್ಗೆ ಗೊಂದಲ ಇರುವುದನ್ನು ನಿವಾರಿಸಲು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಯಾರೆಲ್ಲ ಓಡಾಡಬಹುದು ಹಾಗೂ ಯಾರೆಲ್ಲ ಓಡಾಡಬಾರದು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಲಾಗಿದೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಟೆಲಿಕಾಂ ಕಂಪನಿ ಉದ್ಯೋಗಿಗಳು ಐಡಿಕಾರ್ಡ್ ತೋರಿಸಿ ಓಡಾಡಬಹುದು ಎಂದು ಎಂದು ಹೇಳಿದರು.
ರೋಗಿಗಳು, ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ ನಾಗರೀಕರು ಓಡಾಡಬಹುದು. ತಮ್ಮ ಮನೆಯ ಆಸುಪಾಸಿನ ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ತೆಗೆದಿರಬಹುದು. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಇರುತ್ತದೆ. ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ. ರೈಲ್ವೆ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಟಿಕೆಟ್ ತೋರಿಸಬೇಕು ಎಂದು ಸ್ಪಷ್ಟನೆ ನೀಡಿದರು.
ಮದುವೆ ಕಾರ್ಯಕ್ರಮಕ್ಕೆ 50 ಜನರು ಮಾತ್ರ ಹೋಗಬೇಕು. ಸಿನಿಮಾ, ಬಾರ್, ಪಬ್, ಮಾಲ್ ಎಲ್ಲದರ ಮೇಲೆ ನಿಷೇಧ ಹೇರಲಾಗಿದೆ. ಧಾರ್ಮಿಕ, ರಾಜಕೀಯ ಗುಂಪು ಸೇರುವಿಕೆ ನಿಷೇಧ ಇದೆ. ಪಾರ್ಕ್ ಓಪನ್ ಇರುತ್ತದೆ. ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಆದರೆ ಅರ್ಚಕರು ಮಾತ್ರ ಹೋಗಬಹುದು ಎಂದು ತಿಳಿಸಿದರು.
ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎರಡು ದಿನ ಕಟ್ಟಡದ ಸಿವಿಲ್ ಕೆಲಸ ಇರುವುದಿಲ್ಲ. ಉಳಿದ ದಿನ ಇರಲಿದೆ. ಅಂತರ್ ಜಿಲ್ಲೆಗೆ ಹೋಗುವವರು ಬಸ್ , ರೈಲು, ವಿಮಾನ ಬಳಸಬಹುದು.. ರೋಗಿಗಳು ಖಾಸಗಿ ವಾಹನದಲ್ಲಿ ಓಡಾಡಬಹುದು. ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಎಲ್ಲರೂ ಕೂಡ ಓಡಾಡಬಹುದು. ಅಂತರ್ ಜಿಲ್ಲಾ ಓಡಾಟಕ್ಕೆ ಬಸ್ಸು, ರೈಲು, ವಿಮಾನ ಮಾತ್ರ ಬಳಸಬೇಕು. ಅಂತರ್ ಜಿಲ್ಲಾ ಓಡಾಟಕ್ಕೆ ಖಾಸಗಿ ವಾಹನಗಳಲ್ಲಿ ಓಡಾಡಬೇಡಿ. ರೋಗಿಗಳು, ಅವರ ಕುಟುಂಬಸ್ಥರು ಓಡಾಡುವುದಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದರು.
ಕೋವಿಡ್ನಿಂದ ಮೃತಪಟ್ಟವರಿಗೆ ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ ಪಾಲನೆ ಮಾಡಬೇಕು. ನಾಳೆಯಿಂದ ಪ್ರತಿ ಮೂರು ಗಂಟೆಗೆ 50 ಶವಸಂಸ್ಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ನೀರಿನ ಸಂಪರ್ಕ ಕೂಡ ಲಭ್ಯವಾಗಿದೆ. ಅಂಬ್ಯುಲೆನ್ಸ್ ಗಳು ರಸ್ತೆಯಲ್ಲಿ ಕ್ಯೂ ನಿಲ್ಲಬಾರದು. ಬಂದಂತಹ ಜನರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬಂದ ತಕ್ಷಣ ಯಾವುದೇ ವಿಳಂಬವಿಲ್ಲದೆ ಶವಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿ ಕೂಡ ನಿಯೋಜನೆ ಮಾಡಿದ್ದೇವೆ. ಬೆಂಗಳೂರಿನ ಮೇಲೆ ಇರುವ ಒತ್ತಡ ನೂರಕ್ಕೆ ನೂರು ಕಡಿಮೆಯಾಗಲಿದೆ. ಯಾವುದೇ ಶವ ಸಂಸ್ಕಾರಕ್ಕೆ ಕ್ಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು..
ನಾಳೆ, ನಾಡಿದ್ದು ಮೆಟ್ರೋ ಇರುವುದಿಲ್ಲ..:
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆ ಇಂದು (ಶುಕ್ರವಾರ) ಸಂಜೆ ಸಂಜೆ 7.30 ಕ್ಕೆ ಸ್ಥಗಿತಗೊಳ್ಳಲಿದೆ. ಅದಾದ ಬಳಿಕ ಸೋಮವಾರ ಬೆಳಿಗ್ಗೆ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಶನಿವಾರ ಹಾಗೂ ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
*


ನಿಮ್ಮ ಕಾಮೆಂಟ್ ಬರೆಯಿರಿ