ಅಪೋಲೋ ಆಸ್ಪತ್ರೆ ವಿರುದ್ಧ ವಂಚನೆ ಪ್ರಕರಣ ದಾಖಲು

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಉಲ್ಬಣಗೊಂಡಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಸುಲಿಗೆ ಮಾಡಲು ಆರಂಭಿಸಿವೆ. ಕೋವಿಡ್ 19 ಚಿಕಿತ್ಸೆ ಪಡೆದು ಮನೆಗೆ ತೆರಳಿದ ರೋಗಿಗಳ ಬಗ್ಗೆ ಸುಳ್ಳು ಮಾಹಿತಿ ಉಲ್ಲೇಖಿಸಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ. ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ನೀಡಿರುವ ದೂರಿನ ಮೇರೆಗೆ ಅಪೋಲೊ ಆಸ್ಪತ್ರೆಯ ಸಿಇಓ ಸೇರಿದಂತೆ ಆರು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಬಿಬಿಎಂಪಿ ಕೋಟಾದಡಿಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸೂರ್ಯನಾರಾಯಣಶೆಟ್ಟಿ ಎಂಬುವರು ಅಪೋಲೊ ಆಸ್ಪತ್ರೆಗೆ ಏ. 14 ರಂದು ದಾಖಲಾಗಿದ್ದರು. ಏ. 20 ರಂದು ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದರು. ಆದರೆ, ಸೂರ್ಯ ನಾರಾಯಣಶೆಟ್ಟಿ ಅವರು ಏ. 24 ರ ವರೆಗೂ ಒಳರೋಗಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಬಿಎಂಪಿಯ ಪೋರ್ಟಲ್‌ನಲ್ಲಿ ಅಪೋಲೊ ಆಸ್ಪತ್ರೆ ಸಿಬ್ಬಂದಿ ಉಲ್ಲೇಖಿಸಿದ್ದರು. ಈ ಮೂಲಕ ಬಿಬಿಎಂಪಿ ಕೋಟಾದಡಿ ಮೀಸಲಿಟ್ಟಿದ್ದ ಕೋವಿಡ್ ಬೆಡ್‌ಗಳನ್ನು ಖಾಸಗಿಯವರಿಗೆ ನೀಡಿ ಅಕ್ರಮ ಲಾಭ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಾತ್ರವಲ್ಲ, ರಾಜಾರಾಂ ಎಂಬ ಕೋವಿಡ್ ಸೋಂಕಿತ ವ್ಯಕ್ತಿ ಏ. 16 ರಂದು ಅಸ್ಪತ್ರೆಗೆ ದಾಖಲಾಗಿದ್ದು ಏ. 20 ರಂದು ಮೃತಪಟ್ಟಿದ್ದಾರೆ. ರಾಜಾರಾಂ ಅವರ ಸಂಬಂಧಿಕರಿಂದ ಅಕ್ರಮವಾಗಿ 2.49 ಲಕ್ಷ ರೂ. ಹಣವನ್ನು ಪಡೆದ ಜತೆಗೆ ಏ. 25 ರ ವರೆಗೂ ರಾಜಾರಾಂ ಆಸ್ಪತ್ರೆಯಲ್ಲಿಯೇ ಇರುವುದಾಗಿ ಸುಳ್ಳು ಲೆಕ್ಕ ತೋರಿಸಿ ಬಿಬಿಎಂಪಿಗೂ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ರೀತಿ ಕಾಶಿನಾಥ್ ಎಂಬ ಕೋವಿಡ್ ಸೋಂಕಿತ ರೋಗಿ ಏ. 17 ರಂದು ದಾಖಲಾಗಿ ಏ. 22 ರಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಬಿಬಿಎಂಪಿ ಪೋರ್ಟಲ್‌ನಲ್ಲಿ ಏ. 25 ರ ವರೆಗೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ.
ಈ ಮೂಲಕ ಸುಳ್ಳು ಲೆಕ್ಕ ತೋರಿಸಿ ಖಾಲಿಯಿರುವ ಬಿಬಿಎಂಪಿ ಕೋಟಾದ ಹಾಸಿಗೆಗಳನ್ನು ಖಾಸಗಿಯವರಿಗೆ ನೀಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಕುರಿತ ಸಮಗ್ರ ದಾಖಲೆಗಳನ್ನು ಕಲೆ ಹಾಕಿರುವ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆಸ್ಪತ್ರೆಯ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ