ಮಹಾರಾಷ್ಟ್ರದಲ್ಲಿ ಮೇ ೧ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇಲ್ಲ..!

ಮುಂಬೈ:: ಮಹಾರಾಷ್ಟ್ರ ಸರ್ಕಾರವು 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕೆ ಲಸಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಸಾಂಕ್ರಾಮಿಕರೋಗ ತಜ್ಞರು ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಒಂದು ಕಡೆ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ಇನ್ನೊಂದು ಕಡೆ ಪ್ರಸ್ತುತ ನಡೆಯುತ್ತಿರುವ ಕೊರೊನಾ ವೈರಸ್ ಲಸಿಕೆ ವಿತರಣೆ ಅಭಿಯಾನವೂ ವೇಗ ಕಳೆದುಕೊಂಡಿದೆ. ಹೀಗೆ ಮುಂದುವರಿದರೆ ಮಹಾರಾಷ್ಟ್ರದಲ್ಲಿ ಮೂರನೇ ಅಲೆಯ ಆತಂಕ ತಪ್ಪಿದ್ದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷ ವಯೋಮಾನದ ಎಲ್ಲರಿಗೂ ಉಚಿತವಾಗಿ ಕೊರೊನಾ ವೈರಸ್ ಲಸಿಕೆಯನ್ನು ನೀಡುವುದಕ್ಕೆ ಸರ್ಕಾರದ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ತಿಳಿಸಿದ್ದು, ಆದರೆ ಮೇ 1ರಿಂದಲೇ ಲಸಿಕೆ ವಿತರಣೆ ಆರಂಭಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಮಹಾರಾಷ್ಟ್ರ ತೀರ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಲಸಿಕೆಯ ಕೊರತೆ ಎದುರಾಗಿದೆ. ವಾಸ್ತವದಲ್ಲಿ ಹೊಂದಿರುವ ಲಸಿಕೆಯಿಂದ ಎಲ್ಲರಿಗೂ ವಿತರಣೆ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೂ ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ತಿಳಿಸಿದ್ದಾರೆ.

ಲಸಿಕೆ ನೀಡಿದ್ದಲ್ಲಿ ಮಾತ್ರ ಕೊರೊನಾ ವೈರಸ್ ನಿಯಂತ್ರಣ:

ಮಹಾರಾಷ್ಟ್ರದಲ್ಲಿ ಒಟ್ಟು ಜನಸಂಖ್ಯೆಯ ಮೂರರ ಎರಡರಷ್ಟು ಜನರಿಗೆ ಲಸಿಕೆಯನ್ನು ನೀಡಿದಾಗ ಮಾತ್ರ ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಸುಮಾರು 9 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 102 ದಿನಗಳಲ್ಲಿ 1.50 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜನರು ಮನೆಗಳಿಂದ ಹೊರ ಬಂದರೆ 3ನೇ ಅಲೆ

ಲಸಿಕೆ ನೀಡದಿದ್ದರೆ ಮುಂದೆ ಜನರು ಮನೆಗಳಿಂದ ಹೊರಗೆ ಬರುತ್ತಾರೆ. ಆಗ ಮತ್ತೆ ಕೊವಿಡ್-19 ಸೋಂಕಿನ ಮೂರನೇ ಅಲೆ ಹರಡಲು ಆರಂಭವಾಗುತ್ತದೆ. ಈ ಹಿಂದೆ ಡಿಸೆಂಬರ್ ತಿಂಗಳಿನಲ್ಲೂ ನಿಯಮಗಳನ್ನು ಸಡಿಲಗೊಳಿಸಿದ್ದಕ್ಕೆ ಜನರ ಓಡಾಟ ಹೆಚ್ಚಾಗಿ ಎರಡನೇ ಅಲೆ ಹೆಚ್ಚಾಯಿತು. ತುರ್ತಾಗಿ ಎಲ್ಲರಿಗೂ ಲಸಿಕೆ ನೀಡದಿದ್ದರೆ ಮೂರನೇ ಅಲೆಗೆ ನಾವೇ ಆಹ್ವಾನ ನೀಡಿದಂತೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ಬುಧವಾರದ ವರೆಗೆ ಒಟ್ಟು 44,73,394 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 37,30,729 ಸೋಂಕಿತರು ಗುಣಮುಖರಾಗಿದ್ದು, 6,73,481 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ