ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲೊನಿಯ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ (45) ಎಂಬವರು ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡು ಬುಧವಾರ ನಿಧನರಾಗಿದ್ದಾರೆಂದು ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮೃತರ ಸಹೋದರ ಮಹಾಂತೇಶ ಅವರು ಶಿಕ್ಷಕ ಬಸವರಾಜ ಅವರ ಸಾವಿನ ಕಾರಣ ತಿಳಿಸಿದ್ದಾರೆ.
ಶಿಕ್ಷಕ ಬಸವರಾಜ ಲೋ ಬಿಪಿ ಹಾಗೂ ಅದರಿಂದ ಸಂಭವಿಸಿದ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೃತರ ಸೋದರ ಮಹಾಂತೇಶ ತಿಳಿಸಿದ್ದಾರೆ. ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡಿದ್ದರಿಂದ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು, ಅದರಿಂದಾಗಿ ಹೃದಯಘಾತವಾಗಿದೆ. ಬಿಪಿ ಲೋ ಆಗುತ್ತಿದ್ದಂತೆ ಅವರನ್ನು ತಕ್ಷಣವೇ ಸಿಂಧನೂರು ನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ಅವರು ಮೃತಪಟ್ಟಿದ್ದನ್ನು ಅಲ್ಲಿನ ವೈದ್ಯರು ಖಚಿತಪಡಿಸಿದರು ಎಂದು ಸಹೋದರ ತಿಳಿಸಿದ್ದಾರೆ.
ಈ ಕುರಿತು ಆಸ್ಪತ್ರೆ ವೈದ್ಯ ಡಾ.ಸುರೇಶ ಮಾಹಿತಿ ನೀಡಿದ್ದು, ‘ಬಸವರಾಜ ಅವರನ್ನು ನಮ್ಮ ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣ ಹೋಗಿತ್ತು ಎಂದು ಹೇಳಿದರು.
ಶಿಕ್ಷಕ ಬಸವರಾಜ ಹೃದಯಾಘಾತದಿಂದ ಮೃತರಾಗಿದ್ದರೂ, ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂಬ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದಕ್ಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವದಂತಿ ಹರಿದಾಡಿದ್ದಕ್ಕೆ ಮೃತನ ಕುಟುಂಬ ವರ್ಗ ಬೇಸರ ವ್ಯಕ್ತಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ