ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಶಿವಯೋಗಿ ಕಳಸದ ವಿಚಾರಣಾಧಿಕಾರಿ

posted in: ರಾಜ್ಯ | 0

ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸಂಭವಿಸಿದ 23 ಮಂದಿಯ ಸಾವಿನ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರ, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.
ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಅವರ ಸೂಚನೆ ಆಧರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ನಡುವೆ ಘಟನೆಯ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ರವಿ, ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆ ವರೆಗೆ 23 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 23 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಒಬ್ಬರು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ರಾತ್ರಿ 12 ಗಂಟೆ ವರೆಗೆ 14 ಮಂದಿ ಮೃತಪಟ್ಟಿದ್ದಾರೆ. ಮಧ್ಯ ರಾತ್ರಿ 12.30ರಿಂದ 2.30ರ ನಡುವೆ ಮೂರು ಜನ, ಬೆಳಗ್ಗೆ ಏಳು ಗಂಟೆ ವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.ಮೃತಪಟ್ಟವರಲ್ಲಿ 18 ಜನರಿಗೆ ತೀವ್ರ ಸ್ವರೂಪದ ರೋಗದ ಸಮಸ್ಯೆ ಇತ್ತು. ಅವರು ಏಪ್ರಿಲ್ 17ರಿಂದ ಆಸ್ಪತ್ರೆಯಲ್ಲಿ ವೆಂಟಿಲೆಟರ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.
ಆಮ್ಲಜನಕ ಕೊರತೆಯಾಗುವ ಬಗ್ಗೆ ನಿನ್ನೆ ಮಧ್ಯಾಹ್ನವೇ ಸಭೆ ನಡೆಸಲಾಯಿತು, ಇರುವ ಆಮ್ಲಜನಕ ಬಳಸಿಕೊಂಡು ಪರಿಸ್ಥಿತಿಯನ್ನು ಹೇಗೆ ನಿರ್ವವಣೆ ಮಾಡಬೇಕು ಎಂಬ ಸಮಾಲೋಚನೆ ನಡೆದಿತ್ತು. ಮಧ್ಯರಾತ್ರಿ 2 ಗಂಟೆ ವೇಳೆಗೆ ಇರುವ ಆಮ್ಲಜನಕ ಮುಗಿದು ಹೋಗಲಿದೆ ಎಂಬ ಮಾಹಿತಿ ರಾತ್ರಿ 10.30ರ ನಂತರ ಸಿಕ್ಕಿತ್ತು ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ