ಬೆಂಗಳೂರು: ಮಾಜಿ ಸಚಿವ ಕೆ. ಬಿ.ಶಾಣಪ್ಪ ಕೋವಿಡ್-19 ಸೋಂಕಿನಿಂದ ಭಾನುವಾರ ಮೃತಪಟ್ಟಿದ್ದಾರೆ. ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಜನತಾ ಪರಿವಾರದಿಂದ ನಾಯಕರಾಗಿ ಬೆಳೆದಿದ್ದ ಶಾಣಪ್ಪ ಅವರು ಜೆ.ಎಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ ಬಿಜೆಪಿಗೆ ಸೇರಿದ್ದ ಶಾಣಪ್ಪ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಲಾಗಿತ್ತು. ನಂತರ ಅವರು ವಿಧಾನ ಪರಿಷತ್ಗೂ ನಾಮನಿರ್ದೇಶನಗೊಂಡಿದ್ದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್ಗೆ ಸೇರಿದ್ದರು.
ಮುಖ್ಯಮಂತ್ರಿ ಬಿಎಸ್ವೈ ಸಂತಾಪ:
ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಣಪ್ಪ ಅವರು ಕಾರ್ಮಿಕ ನಾಯಕರಾಗಿ, ಶಹಾಬಾದ್ ಶಾಸಕರಾಗಿ, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಗೆ ಸೇರಿ ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಅವರ ನಿಧನದಿಂದ ಒಬ್ಬ ನೇರ ನಿಷ್ಠುರ ನಡವಳಿಕೆಯ ನಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಶಾಣಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ