
ತಾನು ಕಂಡುಹಿಡಿದ ಮಾಸ್ಕ್ ಕೊರೊನಾ ವೈರಸ್ ಅನ್ನು ಕೊಲ್ಲುತ್ತದೆ ಎಂದು ಬಂಗಾಳದ ಪುರ್ಬಾ ಬರ್ಧಮನ್ ಜಿಲ್ಲೆಯ 12 ನೇ ತರಗತಿ ವಿದ್ಯಾರ್ಥಿನಿ ದಿಗಂತಿಕಾ ಬೋಸ್ ಹೇಳಿದ್ದಾರೆ. ಅವಳ ಮಾಸ್ಕ್ ಅನ್ನು ಮುಂಬೈನ ಗೂಗಲ್ನ ಮ್ಯೂಸಿಯಂ ಆಫ್ ಡಿಸೈನ್ ಎಕ್ಸಲೆನ್ಸ್ನಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಕುರಿತು ಇಂಡಿಯಾ ಟುಡೆ.ಇನ್ ವರದಿ ಮಾಡಿದ್ದು, ದಿಗಂತಿಕಾ ಅವರ ಮಾಸ್ಕ್ (ಮುಖವಾಡ)ನಲ್ಲಿ ಮೂರು ಕೋಣೆಗಳಿವೆ. ಗಾಳಿಯಲ್ಲಿನ ಧೂಳಿನ ಕಣಗಳನ್ನು ಶೋಧಿಸುವ ಋಣಾತ್ಮಕ ಅಯಾನ್ ಜನರೇಟರ್ ಇದೆ. ಫಿಲ್ಟರ್ ಮಾಡಿದ ಗಾಳಿಯು ಎರಡನೇ ಕೋಣೆಯ ಮೂಲಕ ಪ್ರವೇಶಿಸಿದಾಗ, ಅದು ಮೂರನೆಯದನ್ನು ತಲುಪುತ್ತದೆ, ಇದು ರಾಸಾಯನಿಕ ಕೋಣೆಯಾಗಿದ್ದು, ಸೋಪ್ ಮತ್ತು ನೀರಿನ ಮಿಶ್ರಣವನ್ನು ಹೊಂದಿರುತ್ತದೆ – ಇದು ವೈರಸ್ ಅನ್ನು ಕೊಲ್ಲುತ್ತದೆ ಎಂದು ದಿಗಂತಿಕಾ ಹೇಳಿದ್ದಾರೆ.
ಸೋಪಿನ ನೀರು ವೈರಸ್ ಅನ್ನು ಕೊಲ್ಲುತ್ತದೆ ಎಂದು ನಮಗೆ ತಿಳಿದಿದೆ, ಆದ್ದರಿಂದ ಗಾಳಿಯು ಮೂರನೇ ಕೋಣೆಯನ್ನು ತಲುಪಿದಾಗ, ರಾಸಾಯನಿಕ ದ್ರಾವಣವು ವೈರಸ್ ಅನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ, ಕೋವಿಡ್-ಸೋಂಕಿತ ವ್ಯಕ್ತಿಯು ಮುಖವಾಡವನ್ನು ಬಳಸಿದರೆ, ಅವರು ಉಸಿರಾಡುವ ಗಾಳಿಯು ಇದೇ ರೀತಿಯ ಪ್ರಕ್ರಿಯೆಯ ಮೂಲಕ ಹೊರ ಹೋಗುತ್ತದೆ ಮತ್ತು ಹಿಗಾಗಿ ವೈರಸ್ ಹರಡುವುದನ್ನು ನಿಲ್ಲಿಸಬಹುದು ಎಂದು ಹೇಳುತ್ತಾರೆ ದಿಗಂತಿಕಾ.
ಮುಖವಾಡ (ಮಾಸ್ಕ್) ಮೇಲಿನ ಪ್ರಯೋಗಗಳಿಗಾಗಿ ತಾನು ರಾಜ್ಯ ಆರೋಗ್ಯ ಇಲಾಖೆ ಸಂಪರ್ಕಿಸಿದ್ದೇನೆ ಮತ್ತು ಇದು ಕೋವಿಡ್ -19 ಹರಡುವಿಕೆಯ ವಿರುದ್ಧ ಸಂಭಾವ್ಯ ತಡೆಗೋಡೆಯಾಗಿರಬಹುದು ಎಂದು ದಿಗಂತಿಕಾ ತಿಳಿಸಿದ್ದಾರೆ ಎಂದು ವರದಿ ಹೇಳಿದೆ
ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಮುಖವಾಡವನ್ನು ತಯಾರಿಸಿದ್ದೇನೆ. ಇಂತಹ ವಿಷಯಗಳಲ್ಲಿ ನಾನು ಯಾವಾಗಲೂ ಆಸಕ್ತಿ ಹೊಂದಿದ್ದೇನೆ” ಎಂದು ಅವರು ಹೇಳಿದ್ದಾರೆ.
ದಿಗಾಂತಿಕಾ ಯಾವಾಗಲೂ ಇಂತಹ ಆವಿಷ್ಕಾರಗಳಿಗೆ ಒಲವು ಹೊಂದಿದ್ದಳು ಮತ್ತು ಈ ಹಿಂದೆ ಸುಂದರ್ಬನ್ಸ್ನಲ್ಲಿ ಸ್ಥಳೀಯರಿಗಾಗಿ ಒಂದು ಜೋಡಿ ಕನ್ನಡಕವನ್ನು ತಯಾರಿಸಿದ್ದು, ಈ ಕನ್ನಡಕದಲ್ಲಿ ಜನರು ತಲೆ ತಿರುಗಿಸದೆ ಹಿಂದೆ ನೋಡಬಹುದಾಗಿದೆ. ಇದು ಕಾಡಿನಲ್ಲಿರುವ ಕಾಡು ಪ್ರಾಣಿಗಳಿಂದ ಸ್ಥಳೀಯರಿಗೆ ಹಿಂದಿನಿಂದ ರಕ್ಷಣೆ ಒದಗಿಸಲು ಹಾಗೂ ಬೇಟೆಯಾಡಲು ಸಹಾಯ ಮಾಡುತ್ತದೆ.
ಆಕೆಗೆ ಮೂರು ಬಾರಿ ಎಪಿಜೆ ಅಬ್ದುಲ್ ಕಲಾಂ ಇಗ್ನೈಟ್ ಪ್ರಶಸ್ತಿ ನೀಡಲಾಗಿದೆ. ಕಿವಿಗಳಿಗೆ ತೊಂದರೆಯಾಗದಂತಹ ಆರಾಮದಾಯಕ ಮಾಸ್ಕ್ (ಮುಖವಾಡ) ಆವಿಷ್ಕರಿಸಿದ್ದಕ್ಕಾಗಿ ಆಕೆಗೆ ಮೂರನೇ ಬಾರಿಗೆ ಪ್ರಶಸ್ತಿ ನೀಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ