ವಾಷಿಂಗ್ಟನ್: ಅಮೆರಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಜನರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳಿದ್ದು, ಘೋಷಣೆಯಾಗುತ್ತಿದ್ದಂತೆಯೇ ವೈಟ್ ಹೌಸ್’ನಲ್ಲಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಜಾಯ್ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾಸ್ಕ್ ಧರಿಸದೆ ಭಾಗವಹಿಸಿದರು.
ಇದೊಂದು ಅದ್ಭುತ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ.ಅತೀ ವೇಗವಾಗಿ ಅಮೆರಿಕನ್ನರಿಗೆ ನಾವು ಲಸಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಸಿಡಿಸಿಯ ಹೊರಡಸಿದ ಮಾರ್ಗಸೂಚಿಗಳನ್ನು ತಿಳಿಸಿದ ಅವರು, ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲುವುದು ವಿರಳಾತಿವಿರಳ. ಹೀಗಾಗಿ ನೀವು ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ ಒಂದು ಡೋಸ್ ಪಡೆದು, ಮತ್ತೊಂದು ಡೋಸ್ ಪಡೆಯಲು ಕಾಯುತ್ತಿದ್ದರೆ ಎರಡನೇ ಡೋಸ್ ಲಸಿಕೆ ಪಡೆಯುವವರೆಗೆ ಮಾಸ್ಕ್ ಧರಿಸಬೇಕು ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೇವಲ 114 ದಿನಗಳಲ್ಲಿ 250 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಇದರ ಪ್ರತಿಫಲವಾಗಿ 49 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ.
ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಫೆಡರಲ್, ಸ್ಟೇಟ್, ಸ್ಥಳೀಯ ಅಥವಾ ಪ್ರಾದೇಶಿಕ ಕಾನೂನು, ನಿಯಮಗಳು, ಸ್ಥಳೀಯ ವ್ಯವಹಾರ ಹಾಗೂ ಕೆಲಸದ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಹೊರತುಪಡಿಸಿ ಉಳಿದೆಡೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ತಮ್ಮ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು ಎಂದು ಸಿಡಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ