ಕೊಪ್ಪಳ: ಮೇ 17 ರಿಂದ 5 ದಿನಗಳ ಕಾಲ ಅಂದರೆ ಮೇ ೨೧ರ ವರೆಗೂ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಶನಿವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದೆ. ನಿತ್ಯ ಸಾವು ನೋವುಗಳು ಕೂಡ ಹೆಚ್ಚುತ್ತ ಸಾಗಿದ್ದು, ಇದರ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಅವಶ್ಯವಾಗಿದೆ. ಹೀಗಾಗಿ ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ ಎಲ್ಲವೂ ಸಂಪೂರ್ಣ ಬಂದ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮೇ ೧೭ರಿಂದ ಸಂಪೂರ್ಣ ಜಿಲ್ಲೆಯನ್ನು ಬಂದ್ ಮಾಡಲಾಗುವುದು. ಅಗತ್ಯ ವಸ್ತುಗಳು ಹೊರತು ಪಡಿಸಿ ವಾಹನಗಳ ಸಂಚಾರವನ್ನು ಕೂಡ ಬಂದ್ ಮಾಡುವುದು ಸೇರಿದಂತೆ ಸಂಪೂರ್ಣ ಲಾಕ್ ಡೌನ್ ಮಾಡಲು ಸೂಚಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಿದರು.
ಎಲ್ಲ ಮದುವೆ ಸಮಾರಂಭಗಳಿಗೆ ಮೇ ೩೦ರ ವರೆಗೆ ಬ್ರೇಕ್ ಹಾಕಲಾಗಿದೆ. ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಲಾಗುವುದು. ಗ್ರಾಮೀಣ ಮಟ್ಟದಲ್ಲಿ ಅಲ್ಲಿನ ಜನಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಪತ್ರ ಬರೆಯಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಬೆಡ್ ನೀಡದೆ ಸತಾಯಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ . ಹೋಂ ಐಸೋಲೇಶ್ ಆಗಿರುವವರನ್ನು ಕ್ವಾರಂಟೈನ್ ಮಾಡಲಾಗುವುದು . ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಎರಡನೇ ಅಲೆಯ ಅಪಾಯ ಹೆಚ್ಚಿದೆ. ಆದ್ದರಿಂದ ಕೊರೊನಾ ವೈರಸ್ ಸರಪಳಿ ಮುರಿಯಲು ಜನರು ಕೂಡ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ