ಬೆಂಗಳೂರು: ಕೇಂದ್ರ ಸರ್ಕಾರ ಸೂಚಿಸಿದಂತೆ ರಾಜ್ಯದಲ್ಲಿ ಕೋವಿಶೀಲ್ಡ್ ಡೋಸ್‌ಗಳ ನಡುವಿನ ಅಂತರದಲ್ಲಿ ಬದಲಾವಣೆ ಮಾಡಲಾಗಿದೆ. ನಾಲ್ಕು ವಾರದಿಂದ 12 ವಾರಕ್ಕೆ ಅಂತರ ಹೆಚ್ಚಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊಡಲು ಆದ್ಯತೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಂಮಿತಿ ಅಧ್ಯಕ್ಷ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಅವರು ವಿಧಾನಸೌಧದಲ್ಲಿ ಶನಿವಾರ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿದ್ದರಿಂದ ಕೋವಿಶೀಲ್ಡ್ ಮೊದಲು ಡೋಸ್ ಪಡೆಯುವವರಿಗೂ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಕೋವ್ಯಾಕ್ಸಿನ್ ಎರಡನೇ ಡೋಸ್ ತೆಗೆದುಕೊಳ್ಳುವ ಅವಧಿ ಬಂದವರಿಗೆ ಮಾತ್ರ ನೀಡಲಾಗುತ್ತದೆ. ಅದು ಮುಗಿದ ನಂತರ ಮೊದಲ ಡೋಸಿಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೋವ್ಯಾಕ್ಸಿನ್- ಇನ್ನು ಕೇವಲ 2ನೇ ಡೋಸ್ ಮಾತ್ರ ನೀಡಲಾಗುತ್ತದೆ. ಮೊದಲ ಡೋಸ್ ಪಡೆದು ಆರು ವಾರ ಆಗಿರುವವರು ಮಾತ್ರ 2ನೇ ಡೋಸ್ ಲಸಿಕೆ ಪಡೆಯಬೇಕು.
45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಮೊದಲನೇ ಡೋಸ್ ನೀಡಲು ಆದ್ಯತೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ 2ನೇ ಡೋಸ್ ನೀಡಲಾಗುತ್ತದೆ.ನಂತರದಲ್ಲಿ ಲಭ್ಯತೆ ಆಧಾರದಲ್ಲಿ 18- 44 ವರ್ಷದವರಿಗೆ ಯಾವ ದಿನಾಂಕದಿಂದ ಲಸಿಕೆ ಕೊಡಬೇಕು ಎಂಬುದರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯಾರಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ಪಟ್ಟಿ ಮಾಡಬೇಕು. ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್ ನೆಟ್ ಪ್ರೊವೈಡರ್ಸ್ ಇತ್ಯಾದಿ ಅವರ ಉದ್ಯೋಗ ಆಧರಿಸಿ ತೀರ್ಮಾನ ಮಾಡಲಾಗುತ್ತದೆ.
ಲಸಿಕೆ ಕೊಡುವುದನ್ನು ಆಸ್ಪತ್ರೆಗಳಿಂದ ಹೊರಗೆ ಮಾಡಲು ತೀರ್ಮಾನಿಸಲಾಗಿದ್ದು, ಶಾಲೆ ಮೈದಾನ, ವಿಶಾಲವಾದ ಜಾಗದಲ್ಲಿ ಲಸಿಕೆ ನೀಡಲಾಗುತ್ತದೆ.
ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿಯಲ್ಲಿ ಪ್ರತಿ ಬೆಡ್ ಗೆ ಗರಿಷ್ಠ 10 ರೂಪಾಯಿ ನೀಡಲು ತೀರ್ಮಾನಿದಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ನಿರ್ಧಾರ ಮಾಡಲಾಗಿದೆ ಎಂದರು.
ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ಹೋಮ್ ಐಸೋಲೇಷನ್ಗೆ ಅವಕಾಶ ಇಲ್ಲ. ಗ್ರಾಮೀಣ ಭಾಗದ ಪಿಎಚ್ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಮನೆ ಮನೆಗೆ ಹೋಗಿ ರಾಟ್ ಟೆಸ್ಟ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ಇರಬೇಕು. ಗ್ರಾಮೀಣ ಮಟ್ಟದಲ್ಲಿನ ಹಾಸ್ಟೆಲ್ ಇತ್ಯಾದಿ ಕಡೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಇನ್ನಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಖಾಸಗಿ ವೈದ್ಯರು ಸಲಹೆ ನೀಡಿದ ಸೋಂಕಿತರಿಗೂ ಸರ್ಕಾರಿ ಮೆಡಿಕಲ್ ಕಿಟ್ ಕೊಡಲು ನಿರ್ಧರಿಸಲಾಗಿದೆ.
ವೈರಸ್ ನ ಜೆನೆಟಿಕ್ಸ್ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ ಜೆನೋಮ್ ಲ್ಯಾಬ್‌ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ ಕೈಗೊಳ್ಳಾಗಿದೆ. ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಎರಡು ಆರೋಗ್ಯ ಇಲಾಖೆ ವತಿಯಿಂದ ಮಾಡಲಾಗುತ್ತದೆ.
ಮುಂದಿನ 90 ದಿನಗಳಿಗೆ ಅಗತ್ಯ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ, ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಖರೀದಿಸಲು ತೀರ್ಮಾನ ಹಾಗೂ ಕಪ್ಪು ಶಿಲೀಂಧ್ರ ಸೋಂಕು ತಡೆಗೆ ವಾರಕ್ಕೆ 20,000 ವಯಲ್ಸ್ ಬೇಡಿಕೆಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ 6ರಿಂದ 10 ಸಾವಿರ ವೆಚ್ಚ ತಗಲುತ್ತದೆ. ಜೊತೆಗೆ ಆಮ್ಲಜನಕ ಬಾಟ್ಲಿಂಗ್ ಘಟಕಗಳನ್ನು ಕೆಲವು ಕಡೆ ಸ್ಥಾಪಿಸಲಾಗುತ್ತದೆ.
ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 843 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ. ರೆಮಿಡಿಸ್ವೀರ್- 5 ಲಕ್ಷ ಇಂಜೆಕ್ಷನ್ ಖರೀದಿಗೆ ಜಾಗತಿಕ ಟೆಂಡರ್ ಕರೆಯುತ್ತಿದ್ದು, ಇದಕ್ಕೆ ಇದಕ್ಕೆ 75 ಕೋಟಿ ಮೀಸಲಿಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೋವಿಡ್ ಪರೀಕ್ಷೆ ಮತ್ತಿತರ ಕಿಟ್‌ಗಳನ್ನು 120 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಟಾಸ್ಕ್‌ಫೋರ್ಸ್ ಸಭೆ ಒಪ್ಪಿಗೆ ನೀಡಿದೆ. ಇದರ ಜತೆಗೆ 2 ಲಕ್ಷ ಆಕ್ಸಿಮೀಟರ್ ಖರೀದಿಗೂ ಒಪ್ಪಿಗೆ ನೀಡಲಾಗಿದ್ದು, 160 ಕೋಟಿ ರೂ. ವೆಚ್ಚದಲ್ಲಿ ಕೊರೊನ ಔಷಧಿ, ಬ್ಲಾಕ್ ಫಂಗಸ್ ಔಷಧಿ, ಕೊರೊನಾ ನಿಯಂತ್ರಣದ ಪರಿಕರಗಳನ್ನು ಖರೀದಿಸಲು ಟಾಸ್ಕ್‌ಫೋರ್ಸ್ ಸಮ್ಮತಿಸಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ