ಕುಮಟಾ; ಅರಬ್ಬಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ತೌಕ್ಟೆ ಚಂಡಮಾರುವು ಸಮುದ್ರದಲ್ಲಿ ತೆರೆಗಳ ನರ್ತನಕ್ಕೆ ಕಾರಣವಾಗಿದೆ.
ಶನಿವಾರ ಉತ್ತರಾ ಕನ್ನಡ ಜಿಲ್ಲೆಯ ಕುಮಟಾದ ಕರಾವಳಿಯ ತೀರ ಪ್ರದೇಶದಲ್ಲಿ ಅರಬ್ಬಿ ಸಮುದ್ರದ ತೆರೆಗಳ ಅಬ್ಬರ ಜೋರಾಗಿದೆ. ಸಮುದ್ರದ ನೀರು ತೀರ ಪ್ರದೇಶಗಳ ಒಳಗೆ ಮುನ್ನುಗ್ಗುತ್ತಿದ್ದು ಅಪಾಯದ ಭೀತಿ ಎದುರಾಗಿದೆ.
ಮೀನುಗಾರರಿಗೆ ದೋಣಿ ನಿಲ್ಲಿಸಲು ಸ್ಥಳವಿಲ್ಲದಂತೆ ಸಮುದ್ರವು ತೀರ ಪ್ರದಶವನ್ನು ಅಕ್ರಮಿಸಿ ಮುಂದಕ್ಕೆ ಬರುತ್ತಿದೆ,
ಕುಮಟಾ ತಾಲೂಕಿನ ಕಡ್ಲೆ, ಕಾಗಾಲ,ಬಾಡ,ಅಳ್ವೆಕೋಡಿ ಪ್ರದೇಶದಲ್ಲಿ ಸಮುದ್ರಕೊರೆತ ಆರಂಭವಾಗಿದೆ.
ಹೊನ್ಮಾವ ಹೊಳೆಯ ಅವಾಂತರ;
ಕುಮಟಾದ ಹಳೆ ಕಾರವಾರ ರಸ್ತೆಗೆ ಹೊಂದಿರವ ಮೀನುಮಾರುಕಟ್ಟೆ ಸಮೀಪದ ಹೊನ್ಮಾವ ಹೊಳೆಗೆ ಕುಮಟಾ ಹೆಡ್ ಬಂದರ ಮೂಲಕ ನುಗ್ಗಿದ ಅರಬ್ಬಿ ಸಮುದ್ರದ ನೀರು ಜನ ಜೀವನವನ್ನ ಅಸ್ಥವ್ಯಸ್ತ ಮಾಡಿದೆ.ಸಮೀಪದ ಜನವಸತಿ ಪ್ರದೇಶಕ್ಕೆ ನುಗ್ಗಿರುವ ಉಪ್ಪುನೀರಿನಿಂದ ಮನೆ ತುಂಬಾ ನೀರು ತುಂಬಿದೆ. ಸಮುದ್ರ ತೀರದ ತಗ್ಗು ಪ್ರದೇಶ ಮತ್ತು ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿಯ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಾಲೂಕಾ ಆಡಳಿತ ಸೂಚನೆ ನೀಡಿದೆ.
ಕುಡಿಯುವ ನೀರಿಗೂ ಹಾಹಾಕಾರ;
ಅರಬ್ಬಿ ಸಮುದ್ರ ಉಕ್ಕೇರಿರುವದರಿಂದ ತೀರ ಪ್ರದೇಶದ ಬಾವಿಯ ನೀರೇಲ್ಲ ಉಪ್ಪಾಗಿ ಪರಿಣಮಿಸಿದೆ.ಹೊಲನಗದ್ದೆ ಪಂಚಾಯತದಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಮೂರು ಬಾವಿಯು ಸಮುದ್ರ ನೀರಿನಿಂದ ತುಂಬಿದೆ.ಬಾವಿಯ ನೀರೆಲ್ಲ ಉಪ್ಪಾಗಿ ಕುಡಿಯಲು ಬಾರದಂತಾಗಿದೆ. ಇದರಿಂದ ಹಣ್ಣೇಮಠ,ತೆಪ್ಪ,ಮದ್ಗುಣಿ, ಮಡಿವಾಳ ಕೇರಿ, ಕಾರಹಿತ್ತಲು ಕಡ್ಲೆ,ಬೇಲೆಕೇರಿ, ಹಳ್ಳದ ಕೇರಿ,ಮಂಗ್ಗೋಡ್ಲ ಪ್ರದೇಶದ ಹಳ್ಳಿಯ ಜನರಿಗೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಿದೆ.
ಬಿರುಗಾಳಿ ಸಹಿತ ಮಳೆ;ಶನಿವಾರ ಮಧ್ಯಾಹ್ನದಿಂದ ತಾಲೂಕಿನಲ್ಲಿ ಮಳೆಸುರಿಯುತ್ತಿದ್ದು ವಿದ್ಯುತ್ ಸಹ ಸ್ಥಗಿತ ಗೊಂಡಿದೆ.ಮಳೆಯಿಂದಾಗಿ ದೂರದ ಪ್ರದೇಶಕ್ಕೆ ಹೋಗಿ ಕುಡಿಯುವ ನೀರನ್ನು ತರಲು ಸಾಧ್ಯವಾಗದೆ ಹಳ್ಳಿಯ ಜನರು ಸಂಕಷ್ಟಕ್ಕೀಡಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ