ಶಿರಸಿ :ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಯುನಿಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರೀ ಪ್ರಮಾಣದ ಆಮ್ಲಜನಕ ಸೋರಿಕೆಯಾಗಿದೆ.ಗೊತ್ತಾದ ತಕ್ಷಣವೇ 7 ರೋಗಿಗಳನ್ನು ಅಕ್ಕ ಪಕ್ಕದ ತಾಲೂಕುಗಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಯುನಿಟ್ ನಲ್ಲಿ ಸೋರಿಕೆಯಿಂದ ಸುಮಾರು 30 ಜಂಬೋ ಸಿಲಿಂಡರುಗಳು ಖಾಲಿಯಾಗಿದೆ. ಆಸ್ಪತ್ರೆಯ ಪಕ್ಕದಲ್ಲೇ ಇರುವ ಆಮ್ಲಜನಕ ಪೂರೈಕಾ ಘಟಕದಿಂದ ಶನಿವಾರ ಬೆಳಗಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆಯಾಗದಿದ್ದಾಗ ಸೋರಿಕೆ ಬಗ್ಗೆ ಗೊತ್ತಾಗಿದೆ. ತಕ್ಷಣವೇ ಮುಂದಾಗುವ ಅನಾಹುತ ತಪ್ಪಿಸಲು ಆಮ್ಲಜನಕ ಬೆಂಬಲದ ಮೇಲಿದ್ದ ಕೋವಿಡ್ ರೋಗಳಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ತಳಿಸಲಾಗಿದೆ.
ಮುಂಡಗೋಡಕ್ಕೆ 2 ಸಿದ್ಧಾಪುರ 4 ಹಾಗೂ ಯಲ್ಲಾಪುರಕ್ಕೆ 1 ಸೋಂಕಿತರನ್ನು ಸ್ಥಳಾಂತರ ಮಾಡಲಾಗಿದೆ. 3 ಮಂದಿ ಡಿಸ್ಚಾರ್ಜ್ ಮಾಡಲಾಗಿದೆ., ಮುಂಜಾಗ್ರತೆಯ ಕ್ರಮವಾಗ ಸೋಂಕಿತರನ್ನು ಸ್ಥಳಾಂತರ ಮಾಡಲಾಗಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ 20 ಜಂಬೋ ಸಿಲಿಂಡರ್ ಮಾತ್ರ ಬಾಕಿಯಿದೆ. ಮಾಹಿತಿ ತಿಳಿಯುತ್ತಿದ್ದಂತೇ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿಎಸ್ಪಿ ರವಿ ನಾಯ್ಕ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿ ಕರೆಯಿಸಿ ಅವರು ಪರಿಶೀಲನೆ ಮಾಡಿದ್ದು ಸದ್ಯಕ್ಕೆ ಸೋರಿಕೆ ನಿಲ್ಲಿಸಲಾಗಿದೆ. ಆದರೆ ಹೆಚ್ಚಿನ ಪರಿಶೀಲನೆಗಾಗಿ ಹುಬ್ಬಳ್ಳಿಯಿಂದ ತಜ್ಞರ ತಂಡ ಆಗಮಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ