ಟೂಲ್‌ಕಿಟ್‌ ಪ್ರಕಣದಲ್ಲಿ ಬಿಜೆಪಿಗೆ ಭಾರೀ ಮುಖಭಂಗ: ವಸಂತ ಲದ್ವಾ

ಹುಬ್ಬಳ್ಳಿ: ಕೋವಿಡ್‌ ನಿರ್ವಹಣೆಯಲ್ಲಿ ವಿಫಲಗೊಂಡ ಕೇಂದ್ರದ ಎನ್‌ಡಿಎ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಲಲು ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಟೂಲ್‌ಕಿಟ್‌ ನೆಪದಲ್ಲಿ ಕಾಂಗ್ರೆಸ್‌ ಮೇಲೆ ಗೂಬೆ ಕೂಡ್ರಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದ್ವಾ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್‌ ದೇಶದಲ್ಲಿ ಪುನರಾವೃತ್ತಿ ಆಗಬಹುದೆಂದು ಗೊತ್ತಿದ್ದರೂ ಕೇಂದ್ರ ಸರ್ಕಾರ ಕೇವಲ ಪ್ರಚಾರದಲ್ಲಿ ತೊಡಗಿಕೊಂಡಿತ್ತು. ಇದರಿಂದಾಗಿ ದೇಶದಲ್ಲಿ ಸೋಂಕು ಉಲ್ಬಣಗೊಂಡಿದೆ. ಸಕಾಲದಲ್ಲಿ ಸಮರ್ಪಕ ಪರೀಕ್ಷೆ, ಆಸ್ಪತ್ರೆಗಳಲ್ಲಿ ಸೌಲಭ್ಯ, ಔಷಧ, ಕೋವಿಡ್‌ ಲಸಿಕೆ, ಆಮ್ಲಜನಕವನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ ಇಷ್ಟಾಗಿಯೂ ಬಿಜೆಪಿ ನಾಯಕರು ಇಂದಿಗೂ ಶೀಘ್ರವೇ ಕೋವಿಡ್‌ ಆರೈಕೆ ಕೇಂದ್ರ ಆರಂಭ, ಕೋವಿಡ್‌ ಲಸಿಕೆ ಶೀಘ್ರವೇ ಪೂರೈಕೆ, ಜುಲೈನಲ್ಲಿ ದೊಡ್ಡ ಪ್ರಮಾಣದ ಲಸಿಕೆ ನೀಡುವ ಅಭಿಯಾನ, ಆಮ್ಲಜನಕ ಸಮರ್ಪಕ ಹಂಚಿಕೆ ಯೋಜನೆ ಇತ್ಯಾದಿ ಘೋಷಣೆಗಳೊಂದಿಗೆ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಮಾಹಿತಿಯಿದ್ದರೂ ಉಲ್ಬಣಗೊಳ್ಳುವ ಮೊದಲೇ ಪೂರ್ವ ಸಿದ್ಧತೆ ಹಾಗೂ ಸಮರ್ಪಕ ಯೋಜನೆ ಹಾಗೂ ಸಿದ್ಧತೆ ಮಾಡಿಕೊಳ್ಳುವ ಬದಲಾಗಿ ಅನವಶ್ಯಕವಾಗಿ ಕಾಂಗ್ರೆಸ್‌ ಅನ್ನು ಟೀಕಿಸುವ ಕೆಲಸ ಮಾಡುತ್ತಿದೆ. ಕೋವಿಡ್‌ ನಿಭಾಯಿಸುವಲ್ಲಿ ತಮ್ಮ ಸರ್ಕಾರದ ಅಸಮರ್ಥತೆ ಮುಚ್ಚಿ ಹಾಕಲು ಟ್ವಿಟರ್‌ನಲ್ಲಿ ಟೂಲ್‌ಕಿಟ್‌ ನೆಪದಲ್ಲಿ ತಿರುಚಿದ ಸುದ್ದಿಗಳ ಮೂಲಕ ಕಾಂಗ್ರೆಸ್‌ ಅನ್ನು ಟೀಕಿಸುತ್ತಿದೆ. ಆದರೆ ಅದರಲ್ಲಿ ಬಿಜೆಪಿ ವಿಫಲಗೊಂಡಿದೆ. ಸ್ವತಃ ಟ್ವಿಟರ್‌ ಸಂಸ್ಥೆ ಬಿಜೆಪಿಯ ಟೂಲ್‌ಕಿಟ್‌ಗಳಿಗೆ ತಿರುಚಿದ ಸುದ್ದಿ ಎಂದು ಟ್ಯಾಗ್‌ ಮಾಡಿದ್ದು, ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈಗ ಬಿಜೆಪಿ ಈ ತುರುಚಿದ ಸುದ್ದಿ ಎಂಬ ಟ್ಯಾಗ್‌ ತೆಗೆದುಹಾಕಲು ಯತ್ನಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ದೇಶದ ತುಂಬೆಲ್ಲ ಕಾಂಗ್ರೆಸ್‌ ಕೋವಿಡ್‌ ಸೋಂಕಿತರಿಗೆ ಸಹಾಯ ಮಾಡುತ್ತಿದ್ದು, ಅಂತಹ ಮಾನವೀಯ ಸೇವೆಗಳನ್ನು ಹತ್ತಿಕ್ಕಲು ಸರ್ಕಾರವೇ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡುತ್ತಿದೆ. ದೇಶ ಎದುರಿಸುತ್ತಿರುವ ಈ ಸಂಕಷ್ಟದಲ್ಲಿ ಸಖಾಸುಮ್ಮನೆ ಕಾಂಗ್ರೆಸ್‌ ಟೀಕಿಸುವುದನ್ನು ಬಿಟ್ಟು ಕೋವಿಡ್‌ ಸೋಂಕು ನಿಯಂತ್ರಣಕ್ಕೆ ತರಲು ಸರ್ಕಾರ ಶ್ರಮಿಸಲಿ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದ್ವಾ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement