ಹೆಲ್ಪ್ ಡೆಸ್ಕ್‌ -ಹೆಲ್ಪ್‌ ಲೈನ್ ಸ್ಥಾಪಿಸಿ, ಕೊರೊನಾ ಸೋಂಕಿತರನ್ನು ಕೋವಿಡ್‌ ಕೇರ್‌ ಕೇಂದ್ರಕ್ಕೆ ಕಳುಹಿಸಿ: ಗ್ರಾಪಂ ಅಧ್ಯಕ್ಷ-ಪಿಡಿಒಗಳಿಗೆ ಸಿಎಂ ಸೂಚನೆ

ಬೆಂಗಳೂರು: ಕೊರೊನಾ 2ನೇ ಅಲೆ ಮೊದಲನೆ ಅಲೆಗಿಂತ ಭಿನ್ನವಾಗಿದೆ. ಹೆಚ್ಚು ಹಾನಿಕಾರಕವಾಗಿದೆ ಮತ್ತು ತ್ವರಿತವಾಗಿ ವ್ಯಾಪಿಸುತ್ತದೆ. ಗ್ರಾಮೀಣ  ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು ತುರ್ತು ನಿವಾರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಅವರು ಬುಧವಾರ ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯತಗಳ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.
ಕೋವಿಡ್ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳು ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ನೋಡಿಕೊಳ್ಳಬೇಕು. ಸಂತೆ, ಜಾತ್ರೆ ಮತ್ತಿತರ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಸೋಂಕಿತರಿಗೆ ನೆರವಾಗಲು ಗ್ರಾಮ ಪಂಚಾಯತಗಳಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಹೆಲ್ಪ್ ಲೈನ್ ಪ್ರಾರಂಭಿಸಬೇಕು. ಕಾರ್ಯಪಡೆಗಳ ಜೊತೆ ಕಾರ್ಯನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನು ಪಡೆಯಬಹುದು ಎಂದು ಅವರು ಸಲಹೆ ನೀಡಿದರು.

ಕೊರೊನಾ ವಾರಿಯರ್ಸ್‌ ಎಂದು ಪರಿಗಣನೆ..
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಯನ್ನು ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಕಳೆದ ವಾರ ಘೋಷಿಸಿದ ಪ್ಯಾಕೇಜ್‍ನಲ್ಲಿ ಎಲ್ಲಾ ಗ್ರಾಮ ಪಂಚಾಯತಗಳಿಗೂ ಎಸ್.ಡಿಆರ್ ಎಫ್ ನಿಧಿಯಿಂದ ತಲಾ ರೂ. 50,000ರೂ. ಗಳನ್ನು ಬಿಡುಗಡೆ ಮಾಡಲು ಆದೇಶಿಸಿರುತ್ತೇನೆ. ಸದ್ಯದಲ್ಲಿಯೇ ಹಣ ತಮ್ಮ ಕೈ ಸೇರಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈಗಾಗಲೇ 14ನೇ ಹಣಕಾಸು ಆಯೋಗದ ಅನುದಾನದ ಉಳಿಕೆ ಹಣ, 15ನೇ ಹಣಕಾಸು ಆಯೋಗದ ಅನಿರ್ಬಂದಿತ ಅನುದಾನ ಹಾಗೂ ಗ್ರಾಮ ಪಂಚಾಯತಗಳ ಸ್ವಂತ ಸಂಪನ್ಮೂಲವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಮಕ್ಕಳು, ಮಹಿಳೆಯರು, ವಿಶೇಷ ಚೇತನರು ಹಾಗೂ ವೃದ್ಧರು ತೊಂದರೆಯಲ್ಲಿದ್ದಲ್ಲಿ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ. ಒಂದು ಪಕ್ಷ ಸೋಂಕಿತರು ಮೃತಪಟ್ಟು ಮಕ್ಕಳು ಅನಾಥರಾದಲ್ಲಿ ಅವರನ್ನು ಯಾರೂ ದತ್ತು ತೆಗೆದುಕೊಳ್ಳಲು ಬಿಡಬಾರದು. ಬದಲಾಗಿ ‘ಮಕ್ಕಳ ರಕ್ಷಣಾ ಸಮಿತಿ’ಗಳಿಗೆ ಅವರನ್ನು ಸೇರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಬೆಳಗಾವಿ ಜಿಲ್ಲೆಯ ತೊಂಡಿಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಎನ್. ದೇಸಾಯಿ ಸಂವಾದದ ವೇಳೆ ಗ್ರಾಮದಲ್ಲಿ ಪರೀಕ್ಷೆ ನಡೆಸಲು ಆರ್ ಎಟಿ ಕಿಟ್ ಕೊರತೆ ಇರುವುದರ ಕುರಿತು ಮುಖ್ಯಮಂತ್ರಿಯವರ ಗಮನ ಸೆಳೆದಾಗ, ಕೂಡಲೇ ಒದಗಿಸುವುದಾಗಿ ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

ಕೋವಿಡ್ ನಿಯಂತ್ರಣ: ಗ್ರಾಪಂ ಅಧ್ಯಕ್ಷರಿಗೆ ಸಿಎಂ ಅಭಿನಂದನೆ:
ಬಳ್ಳಾರಿ ಜಿಲ್ಲೆಯ ಅಲಬೂರು ಗ್ರಾಪಂ ಅಧ್ಯಕ್ಷ, 64 ವರ್ಷದ ಶಿವಾನಂದಪ್ಪ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಸಕ್ರಿಯ ಪ್ರಕರಣಗಳನ್ನು 36 ರಿಂದ 1ಕ್ಕೆ ಇಳಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಜಾತ್ರೆ ಮತ್ತಿತರ ಸಮಾರಂಭ ನಡೆಸದಂತೆ ಗ್ರಾಮಸ್ಥರ ಮನವೊಲಿಸಿರುವುದಾಗಿ ಶಿವಾನಂದಪ್ಪ ಅವರು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆ ವರುಣಾ ಗ್ರಾಪಂ ಅಧ್ಯಕ್ಷ ರಾಜೇಶ ಮಾತನಾಡಿ, ವ್ಯಾಕ್ಸಿನ್ ಗಳನ್ನು ಶೀಘ್ರವೇ ಒದಗಿಸುವಂತೆ ಮನವಿ ಮಾಡಿದರು. ವ್ಯಾಕ್ಸಿನ್ ಗಳನ್ನು ಲಭ್ಯತೆ ಆಧರಿಸಿ ಪೂರೈಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಅರಕೇರಿ ಗ್ರಾಪಂ ಅಧ್ಯಕ್ಷ ಭಾಸ್ಕರ್ ಮಾತನಾಡಿ, ಗ್ರಾಮದಲ್ಲಿ ಸೋಂಕಿತರ ಪತ್ತೆಯಾದಾಗ, ಅವರ ಮನೆಗೇ ಔಷಧ, ಆಹಾರ ವಸ್ತುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೆ, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸಲು ಗ್ರಾಪಂ ಟಾಸ್ಕ್ ಫೋರ್ಸ್ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ಕಂಟೇನ್ ಮೆಂಟ್ ಝೋನ್ ಗಳನ್ನು ಹೊರತು ಪಡಿಸಿ, ಇತರ ಪ್ರದೇಶಗಳಲ್ಲಿ ನರೇಗಾ ಕಾಮಗಾರಿ ನಡೆಸುತ್ತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.
ಈ ಸಂವಾದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಗ್ರಾಮೀಣಾಭಿವೃಧ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಮೊದಲಾವರಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement