ಚೆನ್ನೈ: ಮೇಕೆದಾಟುವಿನಲ್ಲಿ ಅನಧಿಕೃತ ನಿರ್ಮಾಣ ಚಟುವಟಿಕೆಗಳ ಆರೋಪ ಪರಿಶೀಲಿಸಲು ಜಂಟಿ ಸಮಿತಿಯೊಂದನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೇಮಿಸಿದೆ.
ಅಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿತ್ತು. ಇದೇ ವರ್ಷದ ಏಪ್ರಿಲ್ 15 ರಂದು ಪ್ರಕಟಗೊಂಡ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿರುವ ನ್ಯಾಯಾಧೀಶ ಕೆ. ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಡಾ ಕೆ ಸತ್ಯಗೋಪಾಲ್, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶಿಸಿದ್ದಾರೆ.
ಉದ್ದೇಶಿತ ಯೋಜನೆ ಪ್ರದೇಶದ ಬಳಿ ಕೆಲ ಚಟುವಟಿಕೆಗಳು ನಡೆಯುತ್ತಿದ್ದು, ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ ಎಂದು ಸುದ್ದಿಪತ್ರಿಕೆಗಳ ವರದಿಯಲ್ಲಿ ಆರೋಪಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಎರಡು ಬಾರಿ ಯೋಜನೆಯನ್ನು ಮುಂದೂಡಲಾಗಿದ್ದು ಅಗತ್ಯ ಅನುಮತಿಯ ಕೊರತೆಯಿದೆ ಎಂಬುದನ್ನು ಉಲ್ಲೇಖಿಸಲಾಗಿತ್ತು ಎಂದು ನ್ಯಾಯಪೀಠ ಹೇಳಿದೆ.
ಮೇಕೆದಾಟುವಿನಲ್ಲಿ ಪರಿಸರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುವುದರಿಂದ ನ್ಯಾಯಾಧೀಕರಣ ಮಧ್ಯಪ್ರವೇಶಿಸಿದೆ.ಆದ್ದರಿಂದ ಈ ವಿಚಾರ ಕೈಗೆತ್ತಿಕೊಳ್ಳಲಾಗಿದೆ. ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ನಡೆಸದೆ ಮತ್ತು ಅಗತ್ಯ ಅನುಮತಿ ಪಡೆಯದೆ ಯೋಜನೆ ಕಾರ್ಯಗತಗೊಳಿಸಿದರೆ ಅಥವಾ ಅನಧಿಕೃತ ಚಟುವಟಿಕೆಯಿಂದ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತಿದ್ದರೆ, ನಂತರ ಈ ನ್ಯಾಯಮಂಡಳಿ ಮಧ್ಯಪ್ರವೇಶಿಸುವ ಅಧಿಕಾರ ಪಡೆಯುತ್ತದೆ ಎಂದು ನ್ಯಾಯಪೀಠ ಹೇಳಿತು.
ಈ ಬಗ್ಗೆ ಪರಿಶೀಲಿಸುವಂತೆ ಸಮಿತಿಗೆ ನ್ಯಾಯಪೀಠ ನಿರ್ದೇಶಿಸಿದೆ. ಸಮಿತಿಗೆ ಸೂಕ್ತ ಲಾಜಿಸ್ಟಿಕ್ ಬೆಂಬಲ ನೀಡುವುದು ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.
ಕೇಂದ್ರ ಪರಿಸರ ಸಚಿವಾಲಯ, ಜಲ ಸಂಪನ್ಮೂಲ ಇಲಾಖೆ. ಕೇಂದ್ರ ನೀರು ಆಯೋಗ, ಕರ್ನಾಟಕ, ತಮಿಳುನಾಡು ಮತ್ತಿತರ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಪೀಠ ನೋಟಿಸ್ ಕಳುಹಿಸಿದ್ದು, ಇದೇ ಮಾಹಿತಿ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ