ರಾಜ್ಯದ ಪ್ರಥಮ ಗ್ರಾಮೀಣ ಕೋವಿಡ್ ಕೇಂದ್ರಕ್ಕೆ ಚಾಲನೆ

ಯಾದಗಿರಿ : ರಾಜ್ಯದ ಪ್ರಪ್ರಥಮ ಗ್ರಾಮೀಣ ಕೋವಿಡ್ ಕೇಂದ್ರಕ್ಕೆ ಶಾಸಕ ನಾಗನಗೌಡ ಕಂದಕೂರು ಗುರುಮಠಕಲ್‌ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಚಾಲನೆ ನೀಡಿದರು.
ಕೋವಿಡ್ ಹಾಟ್ ಸ್ಪಾಟ್‌ಗಳಾದ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಕೊರೊನಾ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ. ಅದಕ್ಕಾಗಿ ತಾಲೂಕಿನ ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸಹಿತ 10 ಬೆಡ್ ಹಾಗೂ ಆಕ್ಸಿಜನ್ ರಹಿತ 10 ಬೆಡ್‌ಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದ ಗ್ರಾಮೀಣ ಜನತೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಪಸ್ ಬಂದ ಪರಿಣಾಮ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹಳ್ಳಿಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೂ ತಿಳಿವಳಿಕೆ ಕೊರತೆಯಿಂದ ಕೆಲ ಜನ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಸಾವು ನೋವುಗಳು ಸಂಭವಿಸುತ್ತಿವೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಬೇಕು. ಪಾಸಿಟಿವ್ ಬಂದವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫ್ಟ್ ಮಾಡಬೇಕು ಮತ್ತು ಸೋಂಕಿತರಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಭೀಕರ ಮತ್ತು ಅಪಾಯಕಾರಿಯಾಗಿದ್ದು ತಮ್ಮ ಜೀವಿತಾವಧಿಯಲ್ಲಿ ಇಂತಹ ಮಹಾಮಾರಿ ವೈರಸ್‌ ಕಂಡಿಲ್ಲ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಸ್ವಯಂ ಸುರಕ್ಷತೆಯನ್ನು ಕಂಡುಕೊಳ್ಳುವುದು ಅತೀ ಮುಖ್ಯ. ಸೋಂಕು ತಗುಲಿದ ನಂತರ ಪಶ್ಚಾತ್ತಾಪ ಪಡುವ ಬದಲು ವೈರಸ್ ತಾಗದಂತೆ ಸೂಕ್ತ ಮುಂಜಾಗ್ರತ ವಹಿಸಬೇಕು ಎಂದುಹೇಳಿದರು.
ಕಾರ್ಯಕ್ರಮದಲ್ಲಿ ಡಿಹೆಚ್‌ಒ ಡಾ. ಇಂದುಮತಿ ಕಾಮಶಟ್ಟಿ, ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಭಿಮನಗೌಡ ಕ್ಯಾತನಾಳ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement