ಯಾದಗಿರಿ : ಯಾರೋ ದೆಹಲಿಗೆ ಹೋದಾಕ್ಷಣ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎನ್ನುವುದಾದರೆ ರಾಜ್ಯದಲ್ಲಿ ದಿನಕ್ಕೊಬ್ಬರು ಮುಖ್ಯಮಂತ್ರಿ ಆಗ್ತಾರೆ. ಇನ್ನೂ 2 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಂದುವರಿಯುತ್ತಾರೆ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯದಲ್ಲಿ ಊಹಾಪೋಹಗಳು ಹೊಸದಲ್ಲ. ಮೊದಲಿನಿಂದಲೂ ಊಹಾಪೋಹಗಳಿಗೆ ರೆಕ್ಕೆ ಪುಕ್ಕಗಳನ್ನ ಕಟ್ಟುವುದು ಜಾಸ್ತಿಯಾಗಿವೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹಾಗೆಲ್ಲ ದೆಹಲಿಗೆ ಹೋದ ತಕ್ಷಣ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎನ್ನುವುದಾದರೆ ದಿನಕ್ಕೊಬ್ಬರು ಸಿಎಂ ಆಗುತ್ತಾರೆ. ಅನಗತ್ಯ ಗೊಂದಲ ಬೇಡ. ಇನ್ನೂ 2 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ. ಕೊರೊನದಂತಹ ಮಹಾಮಾರಿ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಚಿವ ಆರ. ಶಂಕರ ಸ್ಪಷ್ಟಪಡಿಸಿದರು
ಬರುವ ಚುನಾವಣೆಯೂ ಸಹ ಅವರ ನಾಯಕತ್ವದಲ್ಲಿಯೇ ನಡೆಯುತ್ತದೆ ಎಂದ ಅವರು, ಸಚಿವ ಸಿ.ಪಿ ಯೋಗೀಶ್ವರ ಕುರಿತಾಗಿ ಶಾಸಕ ರಾಜುಗೌಡ ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಸಚಿವರು, ಯಡಿಯೂರಪ್ಪ ಅವರ ಬಗೆಗಿನ ಕಳಕಳಿಯಿಂದ ರಾಜುಗೌಡರು ಹೇಳಿದ್ದಾರೆ. ಹಾಗಾಗಿ ನಾನು ಅದನ್ನ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿರುವುದು ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಎಂಬ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ 3 ಪಕ್ಷದ ಸರ್ಕಾರವೂ ಇಲ್ಲ. 36 ಗುಂಪುಗಳೂ ಇಲ್ಲ. ಇರುವುದೊಂದೇ ಬಿಜೆಪಿ ಸರ್ಕಾರ, ಬಿಜೆಪಿ ಎಂಬ ಒಂದೇ ಗುಂಪು. ಇದರಲ್ಲಿ ಯಾರಿಗೂ ಗೊಂದಲಗಳಿಲ್ಲ. ನಾನೂ ಕಳೆದ ಕೆಲ ತಿಂಗಳಿಂದ ಸಚಿವ ಸ್ಥಾನದಲ್ಲಿದ್ದೇನೆ ನಮ್ಮ ಇಲಾಖೆಯಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡಿಲ್ಲ. ಹೀಗಿರುವಾಗ ಅನಗತ್ಯ ಹೇಳಿಕೆಗಳು ಯಾಕೆ. ಪ್ರಸಕ್ತ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ವಿರುದ್ಧ ಕೆಲಸ ಮಾಡುವುದು ಅತಿ ಅವಶ್ಯಕವಾಗಿದೆ ಎಂದರು.
ಇಂತಹ ಸಮಯದಲ್ಲಿ ಸಿ.ಪಿ ಯೋಗೀಶ್ವರ ಅವರ ಬೆಂಬಲಿಗರು ಪ್ರೆಸ್ ಮೀಟ್ ಮಾಡಿರುವುದು ಸರಿಯಲ್ಲ. ನಾನು ಮಾಧ್ಯಮದಲ್ಲಿ ನನ್ನ ಇತಿಮಿತಿಯಲ್ಲಿ ಮಾತನಾಡುವುದು ಬಿಟ್ಟರೆ ಯಾವ ಹೆಚ್ಚಿಗೆ ಪದವನ್ನ ಬಳಸುವುದಿಲ್ಲ ಎಂದು ಯೋಗಿಶ್ವರರ ಬೆಂಬಲಿಗರ ವಿರುದ್ಧ ಕಿಡಿಕಾರಿದರು.
ನಾನು ಆರು ತಿಂಗಳ ಕಾಲ ವಿಧಾನ ಪರಿಷತ್ ಸದಸ್ಯನಾದ ಸಂದರ್ಭದಲ್ಲಿ ಏನನ್ನೂ ಮಾತನಾಡಿಲ್ಲ. ಸಮನ್ವಯತೆ ಬಹಳ ಮುಖ್ಯ.
ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಯನ್ನು ನೀಡಿದ್ದಾರೆ. ನನಗೆ ಕೊಟ್ಟಂತ ಜವಾಬ್ದಾರಿ ಅಚ್ವುಕಟ್ಟಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಯಚೂರು ಸಂಸದ ರಾಜ ಅಮರೇಶ ನಾಯಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ