ಪ್ರಾಥಮಿಕ ಶಿಕ್ಷಕರು ಪ್ರೌಢಶಾಲೆ ಗ್ರೇಡ್-2 ಬಡ್ತಿಗೆ ಅರ್ಹರಲ್ಲ ಎಂದು ಕೆಎಟಿ ಆದೇಶ: 8000 ಶಿಕ್ಷಕರಿಗೆ ಹಿಂಬಡ್ತಿ

ಬೆಂಗಳೂರು: ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(KAT) ಆದೇಶಿಸಿದೆ.
1 -5 ನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಆದೇಶಿಸಲಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರುಗಳಿಗೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ನೀಡಿದ್ದಲ್ಲಿ ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
1 ರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಲಾಗಿದ್ದರೆ ತಕ್ಷಣ ಆ ಶಿಕ್ಷಕರಿಗೆ ನೋಟಿಸ್ ನೀಡಿ ಬಡ್ತಿ ಹಿಂಪಡೆಯಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್ 2 ಶ್ರೇಣಿಗೆ 6 ರಿಂದ 8ನೇ ತರಗತಿ ಬೋಧಿಸುವ ಪದವೀಧರ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರಾಗಿರುತ್ತಾರೆ.
1ರಿಂದ 5ನೇ ತರಗತಿಗಳಿಗೆ ಬೋಧಿಸುವ ಪ್ರಾಥಮಿಕ ಶಿಕ್ಷಕರು ಮತ್ತು 6ರಿಂದ 8ನೇತರಗತಿ ಬೋಧಿಸುವ ಪದವೀಧರ ಶಿಕ್ಷಕರ ಹುದ್ದೆಗಳು ವಿಭಿನ್ನ ಶ್ರೇಣಿಗಳಾಗಿದ್ದು, ಸೇವಾ ಹಿರಿತನದ ಆಧಾರದಲ್ಲಿ ಬೇರೆ ಬೇರೆ ಪಟ್ಟಿ ಮಾಡಬೇಕು. ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನವನ್ನು ಪರಿಗಣಿಸಬೇಕು ಎಂದು ಆದೇಶ ತಿಳಿಸಿದೆ. ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳ ಪ್ರೌಢಶಾಲಾ ಸಹ ಶಿಕ್ಷಕ ಬಡ್ತಿಗೆ ಅನ್ವಯವಾಗಲಿದೆ.
ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ ನೇತೃತ್ವದ ಪೀಠ ಈ ಕುರಿತು ಆದೇಶ ಹೊರಡಿಸಿದೆ. ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಸಹಶಿಕ್ಷಕ ಗ್ರೇಡ್-2 ಪಡೆಯಲು ಅರ್ಹರಲ್ಲ. ಅವರ ಬದಲಿಗೆ 6 -8 ನೇ ತರಗತಿ ಪಾಠ ಮಾಡುವ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರು ಎಂದು ಆದೇಶ ಹೊರಡಿಸಲಾಗಿದೆ.
ಸುಮಾರು 1.30 ಲಕ್ಷ ಪ್ರಾಥಮಿಕ ಶಿಕ್ಷಕರು ತಮ್ಮನ್ನು ಪ್ರೌಢಶಾಲೆ ಸಹಶಿಕ್ಷಕ ಗ್ರೇಡ್-2 ಹುದ್ದೆಗೆ ಪರಿಗಣಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದು ಸುಮಾರು 8 ಸಾವಿರ ಶಿಕ್ಷಕರು ಈಗಾಗಲೇ ಪದೋನ್ನತಿ ಪಡೆದುಕೊಂಡಿದ್ದಾರೆ. ಆದರೆ ಕೆಎಟಿ ಆದೇಶದಿಂದ ಅವರಿಗೆ ಹಿಂಬಡ್ತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement