ಜೂನ್ 7ರ ವರೆಗೆ ಕಾದುನೋಡಿ ಲಾಕ್‌ಡೌನ್ ಕುರಿತು ನಿರ್ಧಾರ: ಶೆಟ್ಟರ

ಹುಬ್ಬಳ್ಳಿ:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೋವಿಡ್ ಸೋಂಕಿತರ ಖಚಿತತೆ ಪ್ರಮಾಣ ಶೇ.16 ರಷ್ಟಿದೆ. ಪಾಸಿಟಿವ್ ದರ ಕಡಿಮೆಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಜೂನ್‌ 7 ರ ವರೆಗೆ ಕಾದು ನೋಡಿ ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ, ಶನಿವಾರ ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನವನವನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋವಿಡ್ ಪಾಸಿಟಿವ್ ದರ ಇಳಿಮುಖವಾಗಲಿದೆ.‌ ಈಗ ಲಾಕ್‌ಡೌನ್ ಯಶಸ್ವಿಯಾಗಿದೆ. ರಾಜ್ಯದಲ್ಲಿ ಇನ್ನೂ ಎಂಟು ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಪಾಸಿಟಿವ್ ಪ್ರಮಾಣ ದರ ಕಡಿಮೆಯಾಗಬಹದು ಅಥವಾ ಹೆಚ್ಚಾಗಬಹದು. ಇದು ಯಾರ‌ ಕೈಯಲ್ಲೂ ಇಲ್ಲ. ದೆಹಲಿಯಲ್ಲಿ ಪಾಸಿಟಿವ್ ದರ ಶೇ.2 ಇದ್ದಾಗಲೂ ದೆಹಲಿ ಮುಖ್ಯಮಂತ್ರಿ ಲಾಕ್‌ಡೌನ್ ನಲ್ಲಿ ಸ್ವಲ್ಪ ಸಡಿಲಿಕೆ ನೀಡಿ ಒಂದು ವಾರಗಳ ಕಾಲ ಲಾಕ್‌‌ಡೌನ್ ಮುಂದುವರಿಸಿದ್ದಾರೆ. ಹಾಗಾಗಿ ಈಗಲೇ ರಾಜ್ಯದಲ್ಲಿ ಲಾಕ್‌ಡೌನ್ ಸಡಲಿಕೆ ಕುರಿತು ಮಾತಾಡುವುದು ಸೂಕ್ತವಲ್ಲ‌ ಎಂದು ಹೇಳಿದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಹೋಟೆಲ್ ಪಾರ್ಸಲ್ ಸೇವೆಗೆ ಅವಕಾಶ:
ರಾಜ್ಯದ ಇತರೆ ಜಿಲ್ಲೆಗಳಿಗಿಂತಲೂ ಕಠಿಣ ಲಾಕ್‌ಡೌನ್ ಧಾರವಾಡದಲ್ಲಿ ಜಾರಿಮಾಡಲಾಗಿದೆ. ಹಲವು ಅಸೋಸಿಯೇಷನ್‌ಗಳು ಲಾಕ್‌ಡೌನ್ ನಿಯಮದಲ್ಲಿ ಕೆಲವು ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ. ಮುಖ್ಯವಾಗಿ ಹೋಟೆಲ್ ಸಂಘದ ವತಿಯಿಂದ ಪಾರ್ಸಲ್ ಸೇವೆ ಆರಂಭಿಸಲು ಅವಕಾಶ ಕೇಳಿದ್ದಾರೆ. ಹೋಟೆಲ್‌ಗಳ ಮೇಲೆ ಅವಲಂಬಿತರಾದವರ ಸಂಖ್ಯೆಯೂ‌ ಹೆಚ್ಚಿದೆ. ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪಾರ್ಸಲ್ ಸೇವೆಗೆ‌ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡಲಾಗುವುದು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಧ್ಯಾಹ್ನ‌ 12 ವರೆಗೆ ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಸದಸ್ಯರು ಬೇರೆ ಕಡೆಯಿಂದ ಟ್ರಕ್‌ಗಳಲ್ಲಿ ಬರುವ ಕಾಳು ಕಡಿಗಳನ್ನು ಅನ್‌ಲೋಡ್ ಮಾಡಲು ಅವಕಾಶ ನೀಡುವಂತೆ ಕೋರಿದ್ದಾರೆ. ಇವುಗಳ ಕುರಿತು ನಿರ್ಧಾರ ಕೈಗೊಳ್ಳಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪ್ರಧಾನಿ ಮೋದಿಯವರಿಂದ ಉತ್ತಮ ಆಡಳಿತ
ದೇಶದ ಆಡಳಿತದ ಚುಕ್ಕಾಣಿ‌ ಹಿಡಿದ ಮೋದಿ ನೇತೃತ್ವದ ಸರ್ಕಾರ ಏಳು ವರ್ಷಗಳನ್ನು ಪೂರೈಸಿ, ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ದೇಶದ‌ ಜನತೆಯ ಪರವಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶದ ಬದಲಾವಣೆ ತರುವಲ್ಲಿ ಮೋದಿಯವರು ಸಫಲರಾಗಿದ್ದಾರೆ. ಜಮ್ಮುಮತ್ತು ಕಾಶ್ಮೀರ, ರಾಮಮಂದಿರ ನಿರ್ಮಾಣದ ವಿಚಾರ ಮತ್ತು ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ.‌ ದೇಶದ ಜನರಿಗೆ ಮೋದಿಯವರ ಆಡಳಿತದಲ್ಲಿ ಸುರಕ್ಷಿತ ಭಾವನೆ ಬಂದಿದೆ. ಹೋರ ದೇಶಗಳಲ್ಲಿ ಕೂಡ ಭಾರತದ ಸಂಸ್ಕೃತಿಗೆ ಬೆಲೆ ನೀಡುವಂತಾಗಿದೆ. ಅನಿರೀಕ್ಷಿತ ಕೋವಿಡ್ 2 ಅಲೆ ಸಂದರ್ಭದಲ್ಲಿ ಕೂಡ ಜನರ ವಿಶ್ವಾಸ ಮೂಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರ ಜಗದೀಶ್ ಶೆಟ್ಟರ್ ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement