ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಮೊರೆನಾ : ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಅವರಿಗೆ ಸೇರಿದ ಆಸ್ತಿಗಳು ಹಾಗೂ ಕುಟುಂಬದ ಸ್ವತ್ತುಗಳು ಸರ್ಕಾರದ ವಶ ಆಗುವುದನ್ನು ತಪ್ಪಿಸಿ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದು ಮಾಡಿದರು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಈಗ ಕಾಂಗ್ರೆಸ್ ಮತ್ತೆ ಪಿತ್ರಾರ್ಜಿತ ತೆರಿಗೆ ಕಾನೂನು ತರಲು ಬಯಸಿದೆ ಎಂದು ಆರೋಪಿಸಿದರು. ಮೇ 7 ರಂದು ಮತದಾನ ನಡೆಯಲಿರುವ ಮಧ್ಯಪ್ರದೇಶದ ಮೊರೆನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಧರ್ಮದ ಆಧಾರದ ಮೇಲೆ ವಿಭಜನೆಯನ್ನು ಒಪ್ಪಿಕೊಳ್ಳುವ ಮೂಲಕ “ದೇಶದ ಕೈಗಳನ್ನು ಕತ್ತರಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ರಾಜೀವ ಗಾಂಧಿಯವರು ತಮ್ಮ ತಾಯಿ ಇಂದಿರಾ ಗಾಂಧಿಯವರ ಮರಣದ ನಂತರ 1985 ರಲ್ಲಿ ಅವರ ಸಂಪತ್ತು ಸರ್ಕಾರಕ್ಕೆ ಹೋಗದಂತೆ ತಡೆಯಲು ಪಿತ್ರಾರ್ಜಿತವಾದ ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ವಿಧಿಸಲಾದ ಪಿತ್ರಾರ್ಜಿತ ತೆರಿಗೆಯನ್ನು ರದ್ದುಗೊಳಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.

ನಾನು ಒಂದು ಕುತೂಹಲಕಾರಿ ಸಂಗತಿಯನ್ನು ಮುಂದಿಡಲು ಬಯಸುತ್ತೇನೆ. ಇಂದಿರಾಗಾಂಧಿ ನಿಧನರಾದಾಗ, ಅವರ ಕೆಲಭಾಗ ಸಂಪತ್ತು ಸರ್ಕಾರಕ್ಕೆ ಹೋಗುತ್ತಿತ್ತು ಯಾಕೆಂದರೆ ಪಿತ್ರಾರ್ಜಿತ ಆಸ್ತಿ ತೆರಿಗೆ ಕಾನೂನುಗಳು ಆಗ ಇದ್ದವು. ಹೀಗಾಗಿ ತಮ್ಮ ಆಸ್ತಿ ಸರ್ಕಾರದ ಪಾಲಾಗಬಾರದು, ತಾವೇ ಉಳಿಸಿಕೊಳ್ಳಬೇಕು ಎಂದು ಸಂಪತ್ತು ಸರ್ಕಾರಕ್ಕೆ ಹೋಗದಂತೆ ತಡೆಯಲು ರಾಜೀವ ಗಾಂಧಿಯವರು ಪಿತ್ರಾರ್ಜಿತ ತೆರಿಗೆಯನ್ನು ರದ್ದುಗೊಳಿಸಿದರು” ಎಂದು ಪ್ರಧಾನಿ ಹೇಳಿದರು.
ಪ್ರಮುಖ ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ, ಪಿತ್ರಾರ್ಜಿತ ತೆರಿಗೆ ಮೂಲಕ ಜನರ ಅರ್ಧಕ್ಕಿಂತ ಹೆಚ್ಚಿನ ಆದಾಯವನ್ನು ಕಸಿದುಕೊಳ್ಳುತ್ತದೆ ಎಂದ ಪ್ರಧಾನಿ, ಅಮೆರಿಕ ಮೂಲದ ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗಳ ಬಗ್ಗೆ ಮತದಾರರಿಗೆ ಎಚ್ಚರಿಕೆ ನೀಡಿದರು. ತನ್ನ ನಾಲ್ಕು ತಲೆಮಾರುಗಳು ತಮಗೆ ವರ್ಗಾಯಿಸಿದ ಸಂಪತ್ತಿನ ಲಾಭವನ್ನು ಪಡೆದುಕೊಂಡಿರುವುದರಿಂದ ಕಾಂಗ್ರೆಸ್ ಈಗ ಪಿತ್ರಾರ್ಜಿತ ತೆರಿಗೆ ಕಾನೂನನ್ನು ಮರಳಿ ತರಲು ಬಯಸಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಆದರೆ ಬಿಜೆಪಿಯು ಅಂತಹುದನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಜನಸಮೂಹಕ್ಕೆ ಭರವಸೆ ನೀಡಿದರು. ಕಷ್ಟಪಟ್ಟು ದುಡಿದು ಕೂಡಿಟ್ಟಿರುವ ಸಂಪತ್ತನ್ನು ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾದರೆ ನಿಮ್ಮಿಂದ ಕಿತ್ತುಕೊಳ್ಳಲಿದೆ ಎಂದು ಹೇಳಿದರು. ಆದರೆ ಮೋದಿ, ನಿಮ್ಮ ಮತ್ತು ಕಾಂಗ್ರೆಸ್‌ನ ನಿಮ್ಮನ್ನು ಲೂಟಿ ಮಾಡುವ ಯೋಜನೆಗಳ ನಡುವೆ ಗೋಡೆಯಾಗಿ ನಿಂತಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್ ನಾಯಕರು ಮತ್ತು ಪ್ರತಿಪಕ್ಷದವರು ನನ್ನನ್ನು ತುಂಬಾ ನಿಂದಿಸುತ್ತಾರೆ” ಎಂದು ಅವರು ಹೇಳಿದರು.
ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪಿಕೊಂಡಿದೆ ಎಂದು ಆರೋಪಿಸಿದರು. ‘ತಾಯಿ ಭಾರತಿ’ಯ ಕೈಗಳನ್ನು ಬಿಚ್ಚುವ ಬದಲು ಕಾಂಗ್ರೆಸ್ ಆಕೆಯ ಕೈಗಳನ್ನು ಕತ್ತರಿಸಿ ದೇಶವನ್ನು ವಿಭಜಿಸಿತು,” ಎಂದು ಆರೋಪಿಸಿದರು.

ಕಾಂಗ್ರೆಸ್ ತನ್ನ ಮುಸ್ಲಿಂ ಮತಬ್ಯಾಂಕ್‌ಗಾಗಿ ಎಸ್‌ಸಿ/ಎಸ್‌ಟಿ/ಒಬಿಸಿಗಳ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಯಸುತ್ತಿದೆ ಮತ್ತು ಧಾರ್ಮಿಕ ತುಷ್ಟೀಕರಣದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದೆ. ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಕಾಂಗ್ರೆಸ್ ಹೇಳುತ್ತದೆ, ಆದರೆ ಬಡವರಿಗೆ ಅದರ ಮೇಲೆ ಮೊದಲ ಹಕ್ಕಿದೆ” ಎಂದು ಅವರು ಒತ್ತಿ ಹೇಳಿದರು. ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿದೆ. ಯಾರಾದರೂ ಮುಸ್ಲಿಂ ಎಂಬ ಕಾರಣಕ್ಕೆ ಉಚಿತ ರೇಷನ್ ಸಿಗುತ್ತಿಲ್ಲ ಎಂದು ನೀವು ಎಂದಾದರೂ ಕೇಳಿದ್ದೀರಾ? ಎಂದು ಮೋದಿ ಜನತೆಯಲ್ಲಿ ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಸಂವಿಧಾನವನ್ನು ರಚಿಸಿದಾಗ, ಉದ್ಯೋಗಗಳಲ್ಲಿಮತ್ತು ಶಿಕ್ಷಣದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಯಿತು. ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಧಾರ್ಮಿಕ ಮೀಸಲಾತಿಗೆ ವಿರುದ್ಧವಾಗಿದ್ದರು, ಆದರೆ ಕಾಂಗ್ರೆಸ್ ಹಿಂಬಾಗಿಲ ಮೂಲಕ ಇದನ್ನು ನೀಡಿದೆ ಎಂದು ಆರೋಪಿಸಿದರು.
ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಗುಟ್ಟಾಗಿ ಮುಸ್ಲಿಮರನ್ನು ಅಕ್ರಮವಾಗಿ ಒಬಿಸಿ ವರ್ಗಕ್ಕೆ ಸೇರಿಸಿದೆ. ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದು ಕಾನೂನುಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆಯು ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮ ಆಧಾರಿತ ಕೋಟಾದ ಬಗ್ಗೆ ಮಾತನಾಡುತ್ತದೆ. ಈ ತರಹದ ನಿಲುವು ಮುಸ್ಲಿಂ ಲೀಗ್‌ನಿಂದ ಪ್ರಭಾವಿತವಾಗಿದೆ ಎಂದು ಮೋದಿ ಆರೋಪಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಾಗ, ಅದು ಮೊದಲು ಆಂಧ್ರಪ್ರದೇಶದಲ್ಲಿ ಧರ್ಮ ಆಧಾರಿತ ಕೋಟಾವನ್ನು ಪರಿಚಯಿಸಿತು, “ಈ ಮಾದರಿಯನ್ನು (ಮೀಸಲಾತಿ) ದೇಶಾದ್ಯಂತ ಜಾರಿಗೆ ತರಲು ಪಕ್ಷವು ಬಯಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಡಿಸೆಂಬರ್ 19, 2011 ರಂದು, ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಕ್ಯಾಬಿನೆಟ್‌ ಟಿಪ್ಪಣಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾದ 27% ಮೀಸಲಾತಿಯ ಭಾಗವನ್ನು ಕತ್ತರಿಸಿ ಧಾರ್ಮಿಕ ಆಧಾರದ ಮೇಲೆ ನೀಡಬೇಕು” ಎಂದು ಒತ್ತಿ ಹೇಳಿತ್ತು. ಹಿಂದುಳಿದ ವರ್ಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಧರ್ಮ ಆಧಾರಿತ ಮೀಸಲಾತಿ ನೀಡಲು ಬಯಸಿದೆ” ಎಂದು ಅವರು ಆರೋಪಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement