ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಚಂಡೀಗಢ: ಪಂಜಾಬ್‌ನ ಫಿರೋಜಪುರದ ಗುರುದ್ವಾರವೊಂದರಲ್ಲಿ ಶನಿವಾರ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ್ದಾನೆಂದು ಆರೋಪಿಸಿ 19 ವರ್ಷದ ಯುವಕನನ್ನು ಹೊಡೆದು ಕೊಲ್ಲಲಾಗಿದೆ.
ಬಂಡಲಾ ಗ್ರಾಮದ ಗುರುದ್ವಾರ ಬಾಬಾ ಬೀರ್ ಸಿಂಗ್‌ನಲ್ಲಿ ಬಕ್ಷೀಶ್ ಸಿಂಗ್ ಎಂಬಾತ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಗುಂಪು ಆತನನ್ನು ಹಿಡಿದು ಥಳಿಸಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸುಖವಿಂದರ್ ಸಿಂಗ್ ಹೇಳಿದ್ದಾರೆ. ಗುರು ಗ್ರಂಥ ಸಾಹಿಬ್‌ ಗ್ರಂಥದ ಕೆಲವು ಪುಟಗಳನ್ನು ಹರಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಆತ ಮಾನಸಿಕ ಅಸ್ವಸ್ಥನಾಗಿದ್ದು, ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿಕೊಂಡಿದ್ದು, ತನ್ನ ಮಗನನ್ನು ಕೊಂದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಬಕ್ಷೀಶ್ ಸಿಂಗ್ ಈ ಹಿಂದೆ ಗುರುದ್ವಾರಕ್ಕೆ ಭೇಟಿ ನೀಡಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಗುರು ಗ್ರಂಥ ಸಾಹಿಬ್‌ ಗ್ರಂಥದ ಕೆಲವು ಪುಟಗಳನ್ನು ಹರಿದು ಓಡಿಹೋಗಲು ಯತ್ನಿಸಿದ ಆತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಥಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಎಸ್‌ಪಿ ಸಿಂಗ್ ತಿಳಿಸಿದ್ದಾರೆ.
ಅಕಾಲ್ ತಖ್ತ್ ಜತೇದಾರ್ ಗಿಯಾನಿ ರಘ್‌ಬೀರ್ ಸಿಂಗ್ ಅವರು, ಇಂತಹ ಘಟನೆಗಳನ್ನು ತಡೆಯುವಲ್ಲಿ ಕಾನೂನು ಯಶಸ್ವಿಯಾಗಲಿಲ್ಲ ಮತ್ತು ಬಕ್ಷೀಶ್ ಅವರ ಸಾವು ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದ್ದಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಕಾನೂನಿನ ಆಡಳಿತವು “ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಶೋಚನೀಯವಾಗಿ ವಿಫಲವಾದಾಗ” ಜನರು ತಮ್ಮದೇ ಆದ ನ್ಯಾಯವನ್ನು ಹುಡುಕಲು ಒತ್ತಾಯಿಸಲ್ಪಡುತ್ತಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement