ನವ ದೆಹಲಿ: ಕೊರೊನಾ ನಿಯಂತ್ರಿಸಲು ಕೆಲವು ಕಠಿಣ ನಿರ್ಬಂಧನೆಗಳನ್ನು ರಾಜ್ಯ ಸರ್ಕಾರಗಳು ಕೈಗೊಂಡಿದೆ. ಇದೀಗ ಅನ್‌ಲಾಕ್ ಪ್ರಕ್ರಿಯೆ ಶುರು ಮಾಡುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಎರಡು ನಿರ್ಣಾಯಕ ನಿಯತಾಂಕಗಳನ್ನು ಪಟ್ಟಿ ಮಾಡಿದೆ.
ಅದರ ಪ್ರಕಾರ ಜಿಲ್ಲೆಗಳಲ್ಲಿ ಕನಿಷ್ಠ ಒಂದು ವಾರದವರೆಗೆ ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳು ವರದಿಯಾಗಬೇಕು. ಜೊತೆಗೆ ಕನಿಷ್ಠ ಶೇ. 70ರಷ್ಟು ದುರ್ಬಲ ಗುಂಪುಗಳಿಗೆ ವ್ಯಾಕ್ಸಿನೇಷನ್ ಆಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.
ಕೇಂದ್ರ ಸರ್ಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಭಾರತ ಸುಮಾರು 344 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಮಾಣ ಶೇಕಡ 5ಕ್ಕಿಂತ ಕಡಿಮೆ ಇದೆ.
ಲಾಕ್ ಡೌನ್ ಸರಾಗಗೊಳಿಸುವ ಪ್ರಕ್ರಿಯೆ ಆರಂಭಿಸಿರುವ ರಾಜ್ಯಗಳು ಕೋವಿಡ್ ಸಕಾರಾತ್ಮಕತೆ ದರವು ಒಂದು ವಾರದ ವರೆಗೆ 5% ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 45 ವರ್ಷದ ದಾಟಿದವರು ಸೇರಿದಂತೆ 60 ವರ್ಷ ಮೀರಿದ ಶೇಕಡ 70ರಷ್ಟು ದುರ್ಬಲ ಗುಂಪುಗಳಿಗೆ ಲಸಿಕೆ ಹಾಕಿಸಿರಬೇಕು ಎಂದು ಐಸಿಎಂಆರ್ ನಿರ್ದೇಶಕರು ಸೂಚಿಸಿದ್ದಾರೆ.
ಕೊರೊನಾ ನಿಯಂತ್ರಣ ಬಂದಿದೆ ಎಂದು ನಿರ್ಧರಿಸಬೇಕಾದರೆ ಕನಿಷ್ಠ ಎರಡು ವಾರಗಳು ಪಾಸಿಟಿವ್ ದರ ಶೇಕಡ 5ಕ್ಕಿಂತ ಕಡಿಮೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಶಿಫಾರಸು ಮಾಡಿತ್ತು. ಇದೀಗ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಎರಡನೇ ಅಲೆ ನಿಯಂತ್ರಿಸಲು ಲಾಕ್ ಡೌನ್ ಜಾರಿ ಮಾಡಿದ್ದ ಅನೇಕ ರಾಜ್ಯಗಳು ನಿಧಾನವಾಗಿ ಅನ್ ಲಾಕ್ ಪ್ರಕ್ರಿಯೆಗೆ ಮುಂದಾಗುತ್ತಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಅಂಕಿಅಂಶಗಳು ಪ್ರಕಾರ ಕಳೆದ ಮೂರು ವಾರಗಳ ನಂತರ ಪರೀಕ್ಷೆಯು ಗಣನೀಯವಾಗಿ ಹೆಚ್ಚಾಗುತ್ತಿದ್ದರೂ ಸಹ ಪಾಸಿಟಿವ್ ದರದಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ ಎಂದು ತೋರಿಸಿದೆ. ದೇಶದಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವ್ ದರ ಶೇಕಡ 8.31ಕ್ಕೆ ಬಂದಿದೆ. ಕಳೆದ ತಿಂಗಳ ಆರಂಭದಲ್ಲಿ ಶೇಕಡ 22ರಷ್ಟು ದಾಟಿದ ದೈನಂದಿನ ಪಾಸಿಟಿವ್ ದರವು ತಿಂಗಳ ಕೊನೆಯ ದಿನದಲ್ಲಿ 6.62ರಷ್ಟು ಕುಸಿದಿದೆ.
ಭಾರತದಲ್ಲಿ ಕಳೆದ 19 ದಿನಗಳಿಂದ ಸೋಂಕು ಇಳಿಮುಖವಾಗುತ್ತಿದ್ದು, ಮಂಗಳವಾರ 1,27,510 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 54 ದಿನಗಳ ಕನಿಷ್ಠ ದೈನಂದಿನ ಸಂಖ್ಯೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ