ರಾಮನಗರ: ಮ್ಯಾನ್ ಹೋಲ್‌ಗೆ ಇಳಿದ ಮೂವರು ಕಾರ್ಮಿಕರ ಸಾವು

ರಾಮನಗರ: ರಾಮನಗರ ಪಟ್ಟಣ ವ್ಯಾಪ್ತಿಯ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಮ್ಯಾನ್‌ಹೋಲ್ ಕ್ಲೀನ್ ಮಾಡಲು ಇಳಿದಿದ್ದ 3 ಕಾರ್ಮಿಕರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರಕ್ಕೆ ತೆಗೆದಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಬರುವ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಘಟನೆ ನಡೆದಿದ್ದು, ಮ್ಯಾನ್‌ಹೋಲ್‌ಗೆ ಇಳಿದಾಗ 3 ಕಾರ್ಮಿಕರು ಮೃತಪಟ್ಟಿದ್ದಾರೆ. ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಬಾರದು ಎಂದು ಇಂಥಾ ದುರ್ಘಟನೆಗಳು ನಡೆದಾಗ ಪ್ರತಿಭಟಿಸಿದರೂ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇರುತ್ತವೆ.
ಗುತ್ತಿಗೆದಾರ ಹರೀಶ್ ಎಂಬುವವರಿಗೆ ಮ್ಯಾನ್‌ಹೋಲ್ ಕಾಮಗಾರಿಯನ್ನು ವಹಿಸಲಾಗಿತ್ತು ಎನ್ನಲಾಗಿದೆ. ರಾಮನಗರದ ಎಪಿಎಂಸಿ ಹಿಂಭಾಗದಲ್ಲಿ ಈ ದುರ್ಘಟನೆ ನಡೆದಿದ್ದು, ನಗರಸಭೆಗೆ ಮಾಹಿತಿಯೇ ಕೊಡದೇ ಕಾರ್ಮಿಕರು ಇಳಿದಿದ್ದರು ಎನ್ನಲಾಗಿದೆ. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಮುಂದಾದ ಇಬ್ಬರು ಕಾರ್ಮಿಕರೂ ಸೇರಿ, ಮೂರು‌ ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರನ್ನು ಮಂಜುನಾಥ್ (29), ಮಂಜುನಾಥ್ (32) ಹಾಗೂ ರಾಜೇಶ್ (40) ಎಂದು ಗುರುತಿಸಲಾಗಿದ್ದು, ಮೃತರು ಬೆಂಗಳೂರಿನ ಕಮಲಾನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.
ನಗರದ 30 ನೇ ವಾರ್ಡ್ ನಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ‌ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ತೆಗೆಯಲು ಈ ಕಾರ್ಮಿಕರು ಮ್ಯಾನ್ ಹೋಲ್ ಮೂಲಕ 15 ಅಡಿ ಆಳಕ್ಕೆ ಇಳಿದಿದ್ದರು.
ಮೊದಲು ರಾಜೇಶ್ ಎಂಬುವವರು ಕೆಳಗೆ‌ ಇಳಿದಿದ್ದು, ಆಯಾ ತಪ್ಪಿ ಬಿದ್ದಿದ್ದಾರೆ. ಪರಿಣಾಮ ಅವರ ತಲೆಗೆ ಪೆಟ್ಟಾಗಿತ್ತು. ಹಿಗಾಗಿ ಇವರನ್ನು ರಕ್ಷಿಸಲು ಉಳಿದಿಬ್ಬರೂ ಕೆಳಗೆ ಇಳಿದಿದ್ದು, ಉಸಿರುಗಟ್ಟಿ ಅಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಆಮ್ಲಜನಕ‌ ಮಾಸ್ಕ್ ತೊಟ್ಟು ಕೆಳಗೆ ಇಳಿದು ಶವಗಳನ್ನು ಹೊರತೆಗೆದರು.
ಈ ಕುರಿತು ರಾಮನಗರ ಜಿಲ್ಲಾ ಪೊಲೀಸ್‌ ಅಧಿಕಾರಿ ಗಿರೀಶ್ , ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಕಾಮಗಾರಿ ನಡೆಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ನರಸಿಂಹಮೂರ್ತಿ, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹಾಗೂ ರಾಮನಗರ ಎಸ್‌ಪಿ ಪಿ.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement