ಹುಬ್ಬಳ್ಳಿ:ರಾಜ್ಯ ಹೈಕೋರ್ಟ್ ಸಾರಿಗೆ ಸಂಸ್ಥೆ ಮುಷ್ಕರ ನಿರತ ಸಿಬ್ಬಂದಿಗೆ ಕೂಡಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಮುಷ್ಕರ ನಿರತ ಸಿಬ್ಬಂದಿ ವರ್ಗಾವಣೆ ಮತ್ತು ಶಿಸ್ತು ಕ್ರಮ ಕೈಗೊಂಡಿರುವ ಪ್ರಕರಣಗಳಲ್ಲಿ ಅವರಿಂದ ಮನವಿ ಸ್ವೀಕರಿಸಿ ಕಾಲಮಿತಿಯಲ್ಲಿ ಮರುಪರಿಶೀಲಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಲವು ಸಿಬ್ಬಂದಿ ವರ್ಗಾವಣೆ ರದ್ದುಗೊಳಿಸಿದೆ. ಹಾಗೂ ಕೆಲವರ ಅಮಾನತು ಆದೇಶ ತೆರವುಗೊಳಿಸಿ ಆದೇಶಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಬಾಜಪೇಯಿ ಅವರು, 365 ಚಾಲನಾ ಸಿಬ್ಬಂದಿಗಳು, 137 ತಾಂತ್ರಿಕ ಸಿಬ್ಬಂದಿ ಮತ್ತು 04 ಆಡಳಿತ ಸಿಬ್ಬಂದಿ ವರ್ಗಾಯಿಸಿ ಆದೇಶಿಸಲಾಗಿತ್ತು. ಅದರಲ್ಲಿ ಅರ್ಹ 70 ಚಾಲನಾ ಸಿಬ್ಬಂದಿ ಮತ್ತು 45 ತಾಂತ್ರಿಕ ಸಿಬ್ಬಂದಿ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
60 ಸಿಬ್ಬಂದಿ ಅಮಾನತಿನಲ್ಲಿರಿಸಿ ಆದೇಶಿಸಲಾಗಿತ್ತು. ಅದರಲ್ಲಿ ಮನವಿ ಸಲ್ಲಿಸಿದ 08 ಸಿಬ್ಬಂದಿ ಅಮಾನತು ಆದೇಶ ತೆರವುಗೊಳಿಸಿ ಆದೇಶಿಸಲಾಗಿದೆ. ಸಂಸ್ಥೆಯ ಸೇವೆಯಿಂದ ಒಟ್ಟು 336 ಸಿಬ್ಬಂದಿ ವಜಾ ಅಥವಾ ಆಯ್ಕೆ ಪಟ್ಟಿಯಿಂದ ತೆಗೆದುಹಾಕಿದ ಪ್ರಕರಣಗಳಲ್ಲಿ 257 ಸಿಬ್ಬಂದಿ ಮೇಲ್ಮನವಿ ಸಲ್ಲಿಸಿದ್ದು, ಈ ವಿಷಯವು ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದನ್ವಯ ಒಟ್ಟು 506 ಸಿಬ್ಬಂದಿ ವರ್ಗಾವಣೆಯಲ್ಲಿ 115 ಸಿಬ್ಬಂದಿ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ ಹಾಗೂ ಅಮಾನತುಗೊಳಿಸಿದ 60 ಸಿಬ್ಬಂದಿಯಲ್ಲಿ ಮನವಿ ಸಲ್ಲಿಸಿದ 8 ಸಿಬ್ಬಂದಿ ಅಮಾನತಿನಿಂದ ತೆರವುಗೊಳಿಸಿ ಆದೇಶಿಸಲಾಗಿದೆ ಎಂದು ವಾಕರಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ