ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ; ಅದರ ಅಗತ್ಯವೂ ಇಲ್ಲ: ಸಚಿವ ಜೋಶಿ ಸ್ಪಷ್ಟನೆ

ಧಾರವಾಡ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ವಿಚಾರವೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ ಹಾಗೂ ಶಾಸಕರ ಸಹಿ ಸಂಗ್ರಹ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಊಹಾಪೋಹ. ಮುಖ್ಯಮಂತ್ರಿ ಪರ ಅಥವಾ ವಿರುದ್ಧ ಯಾವುದೇ ಸಹಿ ಸಂಗ್ರಹ ಅಭಿಯಾನವೂ ನಡೆಯುತ್ತಿಲ್ಲ. ಅಂತಹ ಅಗತ್ಯವೂ ಇಲ್ಲ. ಯಡಿಯೂರಪ್ಪನವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಯಾವುದೇ ಹೆಚ್ಚಿನ ಚರ್ಚೆಯ ಅವಶ್ಯಕತೆ ಇಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ವಿಚಾರ ನಿನ್ನೆಯೇ ಮುಗಿದ ಅಧ್ಯಾಯ. ಅವರ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಯಾವುದೇ ರೀತಿಯ ಸಹಿ ಸಂಗ್ರಹವಾಗಲಿ, ಮುಖ್ಯಮಂತ್ರಿ ಬದಲಾವಣೆ ಚರ್ಚೆಯಾಗಲಿ ಮಾಡುವಂತಿಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಅರವಿಂದ ಬೆಲ್ಲದ: ಸಿಎಂ ಯಡಿಯೂರಪ್ಪ ಪರ 65 ಶಾಸಕರು ಸಹಿ ಸಂಗ್ರಹಿಸಿದ್ದೇವೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿರುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಅಂತಹ ಯಾವುದೇ ಸಹಿ ಸಂಗ್ರಹ ಮಾಡಿಲ್ಲ. ಹಿಂದೆ ಮಾಡಿದ್ದ ಸಹಿಯನ್ನು ಈಗ ಬೇರೆ ಉದ್ದೇಶಕ್ಕೆ ಬಳಸಿಕೊಂಡಿರಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಪರ ಅಥವಾ ವಿರುದ್ಧ ಯಾವುದೇ ಸಹಿ ಸಂಗ್ರಹ ನಡೆಯುತ್ತಿಲ್ಲ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಈ ಹಿಂದೆ ಸಚಿವ ಈಶ್ವರಪ್ಪನವರ ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆ ಬಗ್ಗೆ 65 ಶಾಸಕರ ಸಹಿ ಸಂಗ್ರಹ ಮಾಡಲಾಗಿತ್ತು. ಬಹುಶ: ಶಾಸಕರ ಆ ಸಹಿ ಇರುವ ಪತ್ರವನ್ನು ಈಗ ಬೇರೆ ಉದ್ದೇಶಗಳಿಗೆ ಉಪಯೋಗಿಸಿಕೊಂಡಿರಬಹುದೇ ಹೊರತು ಯಾವುದೇ ಸಹಿ ಸಂಗ್ರಹ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕಾಂಗ ಸಭೆ ಮಾಡಿದಾಗ ಮಾತ್ರ ಎಲ್ಲಾ ವಿಚಾರಗಳು ಗೊತ್ತಾಗುತ್ತದೆ. ಸಹಿ ಸಂಗ್ರಹದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಪರ 65 ಶಾಸಕರ ಸಹಿ ಸಂಗ್ರಹ ಎಂಬ ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement