ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಮತ್ತೆ ಘರ್ಜಿಸಿದ್ದಾರೆ.
ಚೀನಾದ ಕೋವಿಡ್-19 ನಿಂದ ದೇಶಗಳೇ ನಾಶವಾಗಿದ್ದು, ಚೀನಾ ಪರಿಹಾರ ನೀಡಬೇಕೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.
ಉತ್ತರ ಕ್ಯಾರೋಲಿನಾ ರಿಪಬ್ಲಿಕನ್ ಕನ್ವೆನ್ಷನ್ ನಲ್ಲಿ ಮಾತನಾಡಿರುವ ಟ್ರಂಪ್, ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಪರಿಹಾರ ಕೇಳುವುದಕ್ಕೆ ಅಮೆರಿಕ ಹಾಗೂ ವಿಶ್ವಸಮುದಾಯಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
ಚೀನಾ ಪರಿಹಾರ ನೀಡಬೇಕು” ಎಂಬುದನ್ನು ನಾವು ಒಕ್ಕೊರಲಿನಿಂದ ಕೇಳಬೇಕು” ಎಂದು ಟ್ರಂಪ್ ಕರೆ ನೀಡಿದ್ದಾರೆ.
ಚೀನಾದ ಉತ್ಪನ್ನಗಳ ಮೇಲೆ ಶೇ.100 ರಷ್ಟು ತೆರಿಗೆ ವಿಧಿಸಲು ಅಮೆರಿಕ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದಿರುವ ಟ್ರಂಪ್, ಚೀನಾ ವೈರಸ್ ಬರುವವರೆಗೂ ತಾವು ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾಗಿ ಹೇಳಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಚೀನಾ ಹೆಚ್ಚು ಹೆದರುವುದಿಲ್ಲ ಎಂದೂ ಟ್ರಂಪ್ ಟೀಕಿಸಿದ್ದಾರೆ.
ಕೇವಲ ಅಮೆರಿಕವಷ್ಟೇ ಅಲ್ಲದೇ ಎಲ್ಲಾ ದೇಶಗಳೂ ಚೀನಾದಿಂದ 10 ಟ್ರಿಲಿಯನ್ ಡಾಲರ್ ಪರಿಹಾರವನ್ನು ಪಡೆಯುವುದಕ್ಕೆ ಒಗ್ಗಟ್ಟಿನಿಂದ ಮುಂದಾಗಬೇಕು. ಮೊದಲ ಭಾಗವಾಗಿ ಯಾವೆಲ್ಲಾ ದೇಶಗಳು ಚೀನಾದಿಂದ ಸಾಲ ಪಡೆದಿವೆಯೋ ಆ ದೇಶಗಳು ಸಾಲವನ್ನು ಇತ್ಯರ್ಥಗೊಳಿಸಿಕೊಳ್ಳಬೇಕು, ಯಾವುದೇ ದೇಶವೂ ಚೀನಾಗೆ ಸಾಲಗಾರನಾಗಿರಬಾರದು, ಚೀನಾ ಹಲವು ರಾಷ್ಟ್ರಗಳನ್ನು ಹಾಳುಗೆಡವಿದೆ. ಚೀನಾ ವಿಶ್ವಸಮುದಾಯಕ್ಕೆ ಬಾಕಿ ನೀಡಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ