ಬೀದಿ ನಾಯಿ ಹಿಡಿಯಲು ಬೆಳಗಾವಿ ಪಾಲಿಕೆಯಿಂದ 3 ವರ್ಷದಲ್ಲಿ 47. 55 ಲಕ್ಷ ರೂ.ವೆಚ್ಚ..ಒಂದು ನಾಯಿಗೆ 730 ರೂ.ಖರ್ಚು..!

ಬೆಳಗಾವಿ :ಬೆಳಗಾವಿಯಲ್ಲಿ ಬೀದಿನಾಯಿ ಹಾವಳಿ ಎಲ್ಲೆಂದರಲ್ಲಿ  ಹೆಚ್ಚಾಗಿ ಕಂಡು ಬರುತ್ತಿದೆ. ಮಹಾನಗರಪಾಲಿಕೆ ಸಭೆಯಲ್ಲಂತೂ ಬೀದಿನಾಯಿಗಳ ಹಾವಳಿ ಬಗ್ಗೆ ಸದಸ್ಯರು ರಂಪಾಟ ಮಾಡಿದ್ದರು.ಇದಕ್ಕೆ ಕಡಿವಾಣ ಹಾಕಲು ಮುಂದಾದ ಪಾಲಿಕೆ ಮುಂದಾಗಿ ಸಾರ್ವಜನಿಕರ ಹಣವನ್ನು ಜಾಸ್ತಿಯೇ ಖರ್ಚು ಮಾಡಿದ್ದು ಬೆಳಕಿಗೆ ಬಂದಿದೆ. ನಾಯಿ ಹಿಡಿಯುವ ಹೆಸರಿನಲ್ಲಿ ಲಕ್ಷ ಲಕ್ಷ ರೂ ಖರ್ಚು ಮಾಡಿದ್ದು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಬೀದಿನಾಯಿಗಳನ್ನು ಹಿಡಿಯಲು ಪಾಲಿಕೆ ಖರ್ಚು ಮಾಡಿದ್ದು ಬರೋಬ್ಬರಿ 47 ಲಕ್ಷ ರೂ.ಗಳು. ಇದು ಹಿಡಿದ ಪ್ರತಿ ನಾಯಿಗೆ ತಗುಲಿದ ವೆಚ್ಚ 730 ರೂ…!
ಮಾಹಿತಿ ಹಕ್ಕು ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಬೆಳಗಾವಿ ಪಾಲಿಕೆ ನೀಡಿದ ಮಾಹಿತಿ ಈಗ ಬೆಳಗಾವಿ ಮಹಾನಗರದ ಭಾರೀ ಚರ್ಚೆಗೆ ಗ್ರಾಸವಾಗಿದೆ.
2014-15 ಹಾಗೂ 2017-18 ಮತ್ತು 2019-20 ರ 3 ವರ್ಷಗಳ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಿಡಿಯಲು ಒಟ್ಟು 47,55,556 ರೂ. ವೆಚ್ಚ ಮಾಡಲಾದ ಅಂಶ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು  ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ  ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು 2014-15 ನೇ ಸಾಲಿನಲ್ಲಿ 3,944 ನಾಯಿಗಳನ್ನು ಹಿಡಿಯಲು 25,65,805 ರೂ.ಗಳನ್ನು ಮತ್ತು 2017-18 ರ ಅವಧಿಯಲ್ಲಿ 972 ನಾಯಿಗಳನ್ನು ಹಿಡಿಯಲು 6,97,220 ರೂ. ಅದರಂತೆ 2019-20 ನೇ ಸಾಲಿನಲ್ಲಿ 1,598 ನಾಯಿಗಳನ್ನು ಹಿಡಿಯಲು 14,95,531 ರೂ.ಗಳನ್ನು ಪಾಲಿಕೆ ವೆಚ್ಚ ಮಾಡಿದೆ.
ಈ ವೆಚ್ಚಗಳನ್ನು ತಾಳೆ ಹಾಕಲಾಗಿ 1 ಬೀದಿ ನಾಯಿ ಯನ್ನು ಹಿಡಿದು ಸಾಗಿಸಲು ಸರಾಸರಿ 730 ರೂ.ವೆಚ್ಚವಾಗಿರುವುದು ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.
ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಮತ್ತು ಸಿಬ್ಬಂದಿ ಸೇವೆಯನ್ನು ಈ ಕಾರ್ಯ ಕಾರ್ಯಕ್ಕೆ ಬಳಸಲಾಗಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ಬೀದಿ ನಾಯಿ ಹಿಡಿದು ಸಾಗಿಸಲು ಮಹಾನಗರಪಾಲಿಕೆ ಒದಗಿಸಿರುವ ಅಂಕಿ ಅಂಶಗಳು ಬೆಳಗಾವಿ ಮಹಾನಗರದ ಜನತೆ ದಿಗಿಲುಗೊಳಿಸುವಂತಿದೆ.

ಪ್ರಮುಖ ಸುದ್ದಿ :-   ಸೋಂದಾ‌ ಸ್ವರ್ಣವಲ್ಲೀ‌ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಆರಂಭ

ಭೀಮಪ್ಪ ಗಡಾದ ನೀಡಿದ ಆರ್‌ಟಿಐ ಅಡಿ  ಬೆಳಗಾವಿ ಪಾಲಿಕೆ ನೀಡಿದ ಮಾಹಿತಿ ಪ್ರತಿ ಕೆಳಗೆ ಪಿಡಿಎಫ್‌ನಲ್ಲಿದೆ.

belagavi palike information uner rti

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement