ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಲಾಕ್ ಡೌನ್ ವಿಸ್ತರಣೆಗೆ ಸಿಎಂಗೆ ಡಿಸಿಎಂ ಕಾರಜೋಳ ಮನವಿ

posted in: ರಾಜ್ಯ | 0

ಬೆಳಗಾವಿ : ಬೆಳಗಾವಿ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪಾಸಿಟಿವಿಟಿ ದರ ಶೇ.9 ರ ಆಸುಪಾಸಿನಲ್ಲಿ ಇರುವುದರಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕಡೌನ್ ಅನ್ನು ಇನ್ನೊಂದು ವಾರ ಕಾಲ ವಿಸ್ತರಿಸಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು..
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಗಾವಿಯೂ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾಡಳತಗಳೊಂದಿಗೆ ಗುರುವಾರ (ಜೂ.10) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಆಟೋಮೊಬೈಲ್, ಕಟ್ಟಡ ನಿರ್ಮಾಣದಂತಹ ಪ್ರಮುಖ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಇನ್ನೊಂದು ವಾರ ಲಾಕಡೌನ್ ಮುಂದುವರಿಸಬೇಕು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ರೇಷನ್ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಮಕ್ಕಳ ಆಸ್ಪತ್ರೆಯನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ ಎಂದು ಸಚಿವ ಕಾರಜೋಳ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 135 ತಂಡಗಳನ್ನು ರಚಿಸಿಕೊಂಡು ಇದುವರೆಗೆ 1300 ಕ್ಕೂ ಗ್ರಾಮಗಳಲ್ಲಿ ರಾಪಿಡ್ ಆ್ಯಂಟಿಜೆನ್ ಟೆಸ್ಟ್ (ರಾಟ್) ಮಾಡಲಾಗಿದ್ದು, ಇತರೆ ಪರೀಕ್ಷೆ ಸೇರಿದಂತೆ ಒಟ್ಟಾರೆ ಪಾಸಿಟಿವಿಟಿ ದರ ಶೇ. 8.9 ರಷ್ಟಿದೆ.
ಗಡಿ ಭಾಗದ ದೊಡ್ಡ ಜಿಲ್ಲೆಯಾಗಿರುವುದರಿಂದ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಇನ್ನೂ ಒಂದು ವಾರ ಲಾಕಡೌನ್ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಆದ್ದರಿಂದ ಲಾಕಡೌನ್ ಮುಂದುವರಿಸಬೇಕು ಎಂದು ಕಾರಜೋಳ ಮುಖ್ಯಮಂತ್ರಿಗಳಿಗೆ ಮನವರಿಕೆಗೆ ಪ್ರಯತ್ನಿಸಿದರು.
ಜಿಲ್ಲೆಯಲ್ಲಿ ಐದು ತಾಲ್ಲೂಕಿನಲ್ಲಿ ಪಾಸಿಟಿವಿಟಿ ದರ 5 ಕ್ಕಿಂತ ಕಡಿಮೆ ಇದೆ.ಇನ್ನುಳಿದ ತಾಲ್ಲೂಕುಗಳಲ್ಲಿ ಶೇ.10 ಹಾಗೂ ಅದಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ.ಇನ್ನೊಂದು ವಾರ ಅವಕಾಶ ಸಿಕ್ಕರೆ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಗೊಳಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ರಾಟ್‌ ನಲ್ಲಿ ಪಾಸಿಟಿವಿಟಿ ದರ ಶೇ.4 ಕ್ಕಿಂತ ಕಡಿಮೆಯಿದೆ. ಆದರೆ ಆರ್.ಟಿ.-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿ ಕಂಡುಬಂದಿದೆ.ಇನ್ನೊಂದು ವಾರ ಕಾಲಾವಕಾಶ ಸಿಕ್ಕರೆ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ