ಭೂ ಹಗರಣಗಳ ತನಿಖಾಧಿಕಾರಿಯಾಗಿ ರೋಹಿಣಿಯವರನ್ನೇ ನೇಮಿಸಿ: ಮಾಜಿ ಸಚಿವ ವಿಶ್ವನಾಥ

posted in: ರಾಜ್ಯ | 0

ಮೈಸೂರು: ಮೈಸೂರಿನಲ್ಲಿ ಕೇಳಿಬರುತ್ತಿರುವ ಸರ್ಕಾರಿ ಜಮೀನಿನ ಅಕ್ರಮ ಕಳ್ಳತನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ.
ಜಿಲ್ಲೆಯ ಸುತ್ತಮುತ್ತ ಆಗಿರುವ ಭೂ ಹಗರಣಗಳ ಬಗ್ಗೆ ತನಿಖೆ ನಡೆಸಲು ರೋಹಿಣಿ ಸಿಂಧೂರಿ ಅವರನ್ನೇ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದು, ದಾಖಲೆ ಬಿಡುಗಡೆ ಮಾಡಿದ್ದಾರೆ, ಹೀಗಾಗಿ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ತನಿಖೆ ನಡೆಸಬೇಕೆಂದು ಅವರು ಇಂದು ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಒತ್ತಾಯಿಸಿದ್ದಾರೆ
ಬೆಂಗಳೂರಿಗೆ ತೆರಳಿ ಕಂದಾಯ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೈಸೂರು ಸುತ್ತಮುತ್ತ ಆಗಿರುವ ಭೂ ಹಗರಣಗಳ ಬಗ್ಗೆ ತನಿಖೆ ನಡೆಸಲು ರೋಹಿಣಿ ಸಿಂಧೂರಿ ಅವರನ್ನೇ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ ಎಂದು ಆಗ್ರಹಿಸುತ್ತೇನೆ ಎಂದರು.
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಜಿಲ್ಲೆಯ ಸುತ್ತಮುತ್ತ ಆಗುತ್ತಿರುವ ಭೂ ಹಗರಣ ಬಯಲಿಗೆಳೆಯುವ ಕೆಲಸ ಆರಂಭಿಸಿದ್ದರು. ಅದರಲ್ಲಿ ನಾಲ್ಕು ಆದೇಶಗಳನ್ನು ಈಗಾಗಲೇ ಮಾಡಿದ್ದಾರೆ. ಅದರ ಪ್ರತಿ ಜೊತೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಈ ಬಗ್ಗೆ ಕ್ರಮ ವಹಿಸಬೇಕು. ಹಿಂದಿನ ಜಿಲ್ಲಾಧಿಕಾರಿ ಭೂ ಆಕ್ರಮಣದ ಬಗ್ಗೆ ನೀಡಿರುವ ನಾಲ್ಕು ಆದೇಶಗಳು ಜಾರಿಯಾಗಬೇಕು. ಜೊತೆಗೆ ಇನ್ನೂ ಹತ್ತಾರು ಪ್ರಕರಣಗಳಿದ್ದು, ಕೋವಿಡ್‌ ವಿರುದ್ಧದ ಹೋರಾಟದ ಜೊತೆಗೆ ಭೂ ಅತಿಕ್ರಮಣದ ವಿರುದ್ಧವೂ ಹೋರಾಟ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ನಾನು ಮೈಸೂರಿನ ಹಿರಿಯ ರಾಜಕಾರಣಿ, ಮೂಲತಃ ಅಡ್ವೊಕೇಟ್, ಇದೇ ಜಿಲ್ಲೆಯವನಾಗಿ ನಾನು ಹೇಳುವುದು ಮೈಸೂರು ಸಾಂಸ್ಕೃತಿಕ, ಪರಂಪರೆ ಇರುವ ಜಿಲ್ಲೆ. ಅಂತಹುದರಲ್ಲಿ ಇಂದು ರಾಜಕಾರಣಿಗಳು ಮೈಸೂರಿನ ಸಾಂಸ್ಕೃತಿಕ ಆಡಳಿತವನ್ನು ಹಾಳು ಮಾಡುತ್ತಿದ್ದಾರೆ. ಕೊರೋನಾ ಓಡಿಸಿ ಎಂದರೆ ಇಲ್ಲಿನ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿಗೆ ಜಿಲ್ಲಾಧಿಕಾರಿಗಳನ್ನೇ ಓಡಿಸಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ರಾಜಕಾರಣಿಗಳ ಕಿತಾಪತಿಗೆ ಶಿಲ್ಪಾ ನಾಗ್ ಬಲಿಪಶುವಾದರು. ರೋಹಿಣಿ ಸಿಂಧೂರಿಯವರು ಬಹಳ ಒಳ್ಳೆಯ ಅಧಿಕಾರಿ, ಶಿಲ್ಪಾ ನಾಗ್ ಕೂಡ ಉತ್ತಮ ಆಡಳಿತಗಾರ್ತಿ, ರಾಜಕಾರಣಿಗಳ ಸ್ವಾರ್ಥಕ್ಕೆ ಅಂತವರನ್ನು ಜಿಲ್ಲೆಯಿಂದ ಹೊರಗೆ ಹಾಕಿದ್ದು ಎಷ್ಟು ಸರಿ ಎಂದು ವಿಶ್ವನಾಥ್ ಪ್ರಶ್ನಿಸಿದರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ