ಮೆಹುಲ್ ​ಚೋಕ್ಸಿ ಪರಾರಿಯಾಗುವ ಸಾಧ್ಯತೆಯಿದೆ, ಜಾಮೀನು ನೀಡುವುದಿಲ್ಲ ಎಂದ ಡೊಮಿನಿಕಾ ಕೋರ್ಟ್​

ಮೆಹುಲ್ ​ಚೋಕ್ಸಿ ವಿಮಾನದಲ್ಲಿ  ಡೊಮಿನಿಕಾದಿಂದ ಪರಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಿ ದೇಶಭ್ರಷ್ಟ ವಜ್ಯ ವ್ಯಾಪಾರಿ ಮೆಹುಲ್ ​ಚೋಕ್ಸಿಗೆ ಡೊಮಿನಿಕಾದ ಹೈ ಕೋರ್ಟ್​ ಜಾಮೀನು ನಿರಾಕರಿಸಿದೆ. ಭಾರತದ ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ಗೆ ಸಹಸ್ರಾರು ಕೋಟಿ ರೂಪಾಯಿ ವಂಚಿಸಿರುವ ​ ಆರೋಪ ಹೊತ್ತಿರುವ ಚೋಕ್ಸಿ, ಸದ್ಯ ಡೊಮಿನಿಕಾದ ಜೈಲಿನಲ್ಲಿದ್ದಾನೆ. ಆದರೆ ಮೆಹುಲ್ ​ಚೋಕ್ಸಿ ತನ್ನನ್ನು ಆಂಟಿಗೋವಾ ಪೊಲೀಸರು ಆಂಟಿಗುವಾದ ಜಾಲಿ ಬಂದರಿನಿಂದ ಮೇ 23ರಂದು ಅಪಹರಿಸಿದ್ದರು ಎಂದು ಹೇಳಿದ್ದಾನೆ.

ಕೆರೆಬಿಯನ್ ಸಮುದಾಯದ ಪ್ರಜೆಯಾಗಿರುವ ತನ್ನ ಕಕ್ಷಿದಾರ ಮೆಹುಲ್ ​ಚೋಕ್ಸಿ ವಿರುದ್ಧವಿರುವುದು ಜಾಮೀನು ನೀಡಬಹುದಾದ ಆಪಾದನೆಯಷ್ಟೇ. ಐದು ಸಾವಿರ ರೂಪಾಯಿ ದಂಡ ಕಟ್ಟಿಸಿಕೊಂಡು ಆತನನ್ನು ಬಿಟ್ಟುಬಿಡಬಹುದು. ಆತ ವಿಮಾನದಲ್ಲಿ ಪರಾರಿಯಾಗುವ ಸಾಧ್ಯತೆಯೇನೂ ಇಲ್ಲ, ಆರೋಗ್ಯವೂ ಸರಿಯಿಲ್ಲ. ಹಾಗಾಗಿ ಜಾಮೀನು ನೀಡಿ ಎಂದು ​ಚೋಕ್ಸಿ ವಕೀಲರು ಕೋರ್ಟಿಗೆ ಮನವಿ ಮಾಡಿದರು. ಆದರೆ ಚೋಕ್ಸಿ ವಿಮಾನದಲ್ಲಿ ಪರಾರಿಯಾಗುವ ಸಾಧ್ಯತೆ (flight risk) ಮತ್ತು ಆತನ ವಿರುದ್ಧ ಇಂಟರ್​​ಪೋಲ್​ ರೆಡ್​ ಕಾರ್ನರ್​ ನೋಟಿಸ್​ ಇದೆಯೆಂಬ ಪ್ರತಿ ವಾದವನ್ನು ಪುರಸ್ಕರಿಸಿದ ಡೊಮಿನಿಕಾ ಹೈಕೋರ್ಟ್ ಜಡ್ಜ್​ ವೇಯ್ನೆಟ್ ಆಡ್ರೀನ್ ರಾಬರ್ಟ್ಸ್,​​ ಜಾಮೀನು ನಿರಾಕರಿಸಿದರು.

ಮೆಹುಲ್ ​ಚೋಕ್ಸಿ ಡೊಮಿನಿಕಾ ರಾಷ್ಟ್ರದಲ್ಲಿ ಗುರುತರವಾದ ಅಪರಾಧವೆಸಗಿಲ್ಲ ಎಂಬ ಆತನ ವಕೀಲರ ವಾದವನ್ನು ಡೊಮಿನಿಕಾ ಹೈಕೋರ್ಟ್ ಜಡ್ಜ್‌ ಒಪ್ಪಿಕೊಂಡರಾದರೂ, ಒಂದು ವೇಳೆ ಆತನಿಗೆ ಈ ಹಂತದಲ್ಲಿ ಜಾಮೀನು ನೀಡಿದರೆ ಆತ ದೇಶದಿಂದ ಪರಾರಿಯಾಗುವುದಿಲ್ಲ ಎಂಬುದಕ್ಕೆ ಕಾತ್ರಯಿದೆ ಎಂದು ಪ್ರಶ್ನಿಸಿದರು. ಆತ (ವಿಮಾನದಲ್ಲಿ) ಪರಾರಿಯಾಗುವ ಸಾಧ್ಯತೆಯಿದೆ. ಹಾಗಾಗಿ ಜಾಮೀನು ನೀಡಲು ಬರುವುದಿಲ್ಲ ಎಂದು ಹೇಳಿದರು.
ಮೆಹುಲ್ ​ಚೋಕ್ಸಿ ಹೇಳುವಂತೆ ಆತ ತನ್ನ ಸಹೋದರನ ಜೊತೆ ಯಾವುದೋ ಹೋಟೆಲ್​ನಲ್ಲಿ ವಾಸ್ತವ್ಯದಲ್ಲಿದ್ದಾನಂತೆ. ಕೋರ್ಟ್​ ಮತ್ತು ಸ್ಥಳೀಯ ಪೊಲೀಸರಿಗೆ ಅದು ಖಚಿತ ವಿಳಾಸವೂ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನ ವಿಚಾರಣೆ ಇನ್ನೂ ಆರಂಭವಾಗಿಲ್ಲ ಎಂದೂ ಜಾಮೀನು ನಿರಾಕರಿಸಿದ ಕೋರ್ಟ್ ಸ್ಪಷ್ಟಪಡಿಸಿತು.
ಇದೇ ವೇಳೆ ಭಾರತ ಸರ್ಕಾರವೂ ಸಹ ಮೆಹುಲ್ ​ಚೋಕ್ಸಿ ಭಾರತದ ಪ್ರಜೆ ಮತ್ತು ಆತ ತೀವ್ರತರವಾದ ಆರ್ಥಿಕ ಅಪರಾಧ ಎಸಗಿದ್ದಾನೆ ಎಂದು ತಿಳಿಸಿ ಎರಡು ಅಫಿಡವಿಟ್​​ಗಳನ್ನು (affidavit) ಕೋರ್ಟ್​ಗೆ ಸಲ್ಲಿಸಿದೆ. ಪಂಜಾಬ್​ ಬ್ಯಾಂಕ್​ ವಂಚನೆ ಪ್ರಕರಣದ ತನಿಖೆಯ ಹೊಣೆಹೊತ್ತಿರುವ ಸಿಬಿಐನ ಉಪ ಪ್ರಧಾನ ನಿರೀಕ್ಷಕ ಶಾರದಾ ರಾವುತ್ ಮತ್ತು ಡೊಮೊನಿಕಾ ಕಾಮನ್​ವೆಲ್ತ್​ ರಾಷ್ಟ್ರದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿ ಆಜಾದ್​ ಸಿಂಗ್​ ಅವರು ಜಂಟಿಯಾಗಿ ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಡೊಮೊನಿಕಾ ಹೈಕೋರ್ಟ್​ನಲ್ಲಿ ಮೆಹುಲ್ ​ಚೋಕ್ಸಿ ಜಾಮೀನು ಅರ್ಜಿ ವಿಚಾರಣೆಗೆ ಬರುವ ಒಂದು ದಿನ ಮುನ್ನ ಇಬ್ಬರೂ ಅಧಿಕಾರಿಗಳು ತಲಾ ಒಂದು ಅಫಿಡವಿಟ್ ಸಲ್ಲಿಸಿದ್ದರು. ಅಸಲಿಗೆ ಮೆಹುಲ್ ​ಚೋಕ್ಸಿ ಭಾರತೀಯ ಪೌರತ್ವವವನ್ನು (Indian citizenship) ವಾಪಸ್​ ಮಾಡಿರುವುದನ್ನು ಭಾರತ ಸರ್ಕಾರ ಅನುಮೋದಿಸಿಯೇ ಇಲ್ಲ. ಹಾಗಾಗಿ ಆತ ಇನ್ನೂ ಭಾರತದ ಪ್ರಜೆಯೇ ಆಗಿದ್ದಾನೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement