ಹುಬ್ಬಳ್ಳಿ: ಕೆಎಸ್ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಶನಿವಾರ ನಿಗಮವು ಸರ್ಕಾರದ ಅನುದಾನದಲ್ಲಿ ( ಆರ್.ಟಿ.ಒ ಸಾರಿಗೆ ಇಲಾಖೆ) ಧಾರವಾಡದ ರಾಯಪುರದಲ್ಲಿ, 5.36 ಎಕರೆ ಜಾಗದಲ್ಲಿ ಅಂದಾಜು 15.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರದ ಪರಿವೀಕ್ಷಣೆ ನಡೆಸಿದರು.
ಅಲ್ಲದೆ 4 ಎಕರೆ ಜಾಗದಲ್ಲಿ 5.75 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಚಾಲಕರ ಪರೀಕ್ಷಾ ಸ್ವಯಂಚಾಲಿತ ಚಾಲನಾ ಪಥ ಹಾಗೂ ಸಂವೇದಕಗಳು ಮತ್ತು ಧಾರವಾಡ ಪೂರ್ವದಲ್ಲಿ 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡ ಕಾಮಗಾರಿಗಳ ಪರಿವೀಕ್ಷಣೆಯನ್ನೂ ನಡೆಸಿದರು.
ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರ ಹಾಗೂ ಚಾಲಕರ ಪರೀಕ್ಷಾ ಸ್ವಯಂಚಾಲಿತ ಚಾಲನಾ ಪಥ ಹಾಗೂ ಸಂವೇದಕಗಳ ಅಂತಿಮ ಹಂತದ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡುವ ಬಗ್ಗೆ ಉಪಮುಖ್ಯಮಂತ್ರಿಗಳು, ಸಾರಿಗೆ ಆಯುಕ್ತರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ