ಕಲಾಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಡಾ.ಸಿದ್ದಲಿಂಗಯ್ಯ ಅಂತ್ಯಕ್ರಿಯೆ

ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ಜ್ಞಾನಭಾರತಿ ಕ್ಯಾಂಪಸ್​ನ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆನಡೆಯಿತು.
ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಜೊತೆಗೆ ಪೊಲೀಸ್ ಬ್ಯಾಂಡ್​ನಿಂದ ರಾಷ್ಟ್ರಗೀತೆ ನುಡಿಸಿ ಗೌರವ ನೀಡಲಾಯಿತು. ಬೌದ್ಧ ಧರ್ಮದ ಆಚರಣೆಯಂತೆ ಅಂತಿಮ ವಿಧಿವಿಧಾನ ನೆರವೇರಿತು. ಡಾ.ಸಿದ್ದಲಿಂಗಯ್ಯ ಚಿತೆಗೆ ಪುತ್ರ ಗೌತಮ ಅಗ್ನಿ ಸ್ಪರ್ಶ ಮಾಡಿದರು.
ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಅವರ ಜತೆಯಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅಗಲಿದ ಚೇತನಕ್ಕೆ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು, ‘ರಾಜ್ಯ ಕಂಡ ಶ್ರೇಷ್ಠ ಸಾಹಿತಿ. ದಮನಿತರ ದನಿಯಾಗಿದ್ದವರು ಡಾ.ಸಿದ್ದಲಿಂಗಯ್ಯ. ಅವರ ನಿಧನ ಬಹಳ ನೋವಿನ ಸಂಗತಿ. ತಮ್ಮ ಬದುಕು, ನೋವುಗಳನ್ನೇ ಸಾಹಿತ್ಯವಾಗಿ ಬರೆದವರು ಅವರು. ಎರಡು ಅವಧಿಗಳಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಸದನದಲ್ಲಿ ವಿಚಾರ ಮಂಡನೆ, ಚರ್ಚೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದರು.
ಹಿರಿಯ ಕವಿ, ಸಾಹಿತಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮುಂದೆ ಭಾವುಕರಾಗಿ ಸಿದ್ದಲಿಂಗಯ್ಯರವರ ಶಿಷ್ಯರು ಓ ನನ್ನ ಚೇತನ ಹಾಡನ್ನ ಹಾಡಿ ಅಂತಿಮ ನಮನ ಸಲ್ಲಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಸಾಹಿತಿ ಡಾ.ಸಿದ್ದಲಿಂಗಯ್ಯ ದಲಿತರ ಪರ ಧ್ವನಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಅವರೂ ಒಬ್ಬರು. ಎಲ್ಲ ನೋವುಂಡು ಡಾ.ಸಿದ್ದಲಿಂಗಯ್ಯ ಜನಧ್ವನಿಯಾಗಿದ್ದರು. ನೋವನ್ನು ತಮ್ಮ ಕವನಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಕೊನೆಯವರೆಗೂ ದಲಿತರ ಏಳಿಗೆಗೆ ಯತ್ನಿಸಿದ್ದರು. ಯಾವಾಗ ಸಿಕ್ಕರೂ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಹಂಚಿಕೊಂಡರು.

ಪ್ರಮುಖ ಸುದ್ದಿ :-   ಸುಳ್ಳು ಆದಾಯ ಪ್ರಮಾಣಪತ್ರ ಪ್ರಕರಣ : ಸುಮಾ ಸಾಹುಕಾರಗೆ ಹೈಕೋರ್ಟ್ ತರಾಟೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement