ಬೆಂಗಳೂರು :ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಸ್ಥರಿಗೆ ಪ್ರತಿ ಕುಟುಂಬದ ಒಬ್ಬರಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿರುವ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿ ಮೃತಪಟ್ಟ ಪ್ರತಿ ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ, ಸರ್ಕಾರದಿಂದ ಒಂದು ಕುಟುಂಬದ ಒಬ್ಬರಿಗೆ 1 ಲಕ್ಷ ರೂ.ಗಳ ಪರಿಹಾರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಸೋಂಕಿಗೆ ಕುಟುಂಬದಲ್ಲಿ ಅಪ್ರಾಪ್ತರು ಮೃತಪಟ್ಟಿದ್ದರೆ ಪರಿಹಾರ ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ವಯಸ್ಕರು ಮೃತಪಟ್ಟಿದ್ದರೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ಸಿಗಲಿದೆ.
ಇದಕ್ಕಾಗಿ ರಾಜ್ಯಕ್ಕೆ 300 ಕೋಟಿ ರೂ.ಗಳು ಬೇಕಾಗಬಹುದು. 25ರಿಂದ 30 ಸಾವಿರ ಕುಟುಂಬಗಳಿಗೆ ಇದರಿಂದ ಸಹಾಯ ದೊರಕಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇದರಿಂದಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಕುರಿತ ಮಾರ್ಗಸೂಚಿ ಪ್ರಕಟವಾಗಬೇಕಿದ್ದು, ದೇಶದಲ್ಲಿಯೇ ಇಂತಹ ಘೋಷಣೆ ಮಾಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ