ಭಟ್ಕಳ: ಪಾಕಿಸ್ತಾನ ಹಾಗೂ ಯುಎಇಯಿಂದ ಬರುತ್ತಿದ್ದ ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಯಾಗಿ ಪರಿವರ್ತನೆ ಮಾಡುತ್ತಿದ್ದ ಜಾಲಕ್ಕೆ ಸಂಬಂಧಪಟ್ಟಂತೆ ಭಟ್ಕಳದವನೊಬ್ಬನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುವ ತಂಡದಲ್ಲಿದ್ದ ಭಟ್ಕಳದ ನಿಸಾರ್ ಮಹಮ್ಮದ್ ಮೊಕ್ತೇಸರ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದು, ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಆರೋಪಿ ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿಯಾಗಿದ್ದು, ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಜಾಲವೊಂದು ಅನಧಿಕೃತ ಟೆಲಿಫೋನ್ ಎಕ್ಸ್ಚೇಂಜ್ ಮೂಲಕ ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಯನ್ನು ವಂಚಿಸಿದ ಪ್ರಕರಣದಲ್ಲಿ ಇಬ್ರಾಹಿಂ ಮತ್ತು ಗೌತಮ್ ಎಂವವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ಬಂಧನವಾಗುತ್ತಿದ್ದಂತೆ ನಿಸಾರ್ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದಿದ್ದ. ಆದರೆ ಇದರ ಜಾಡು ಹಿಡಿದ ಬೆಂಗಲೂರಿನ ಪೊಲೀಸರು ಈತನನ್ನು ಸೋಮವಾರ ಬಂಧಿಸಿದ್ದಾರೆ.
ಆರೋಪಿ ನಿಸಾರ್ ಒಂದೇ ಬಾರಿಗೆ ೩೨ ಸಿಮ್ ಕಾರ್ಡ್ಗಳನ್ನು ಬಳಸುವ ಸಿಮ್ ಬಾಕ್ಸ್ ಹೊಂದಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಬಂಧಿತರಾಗಿರುವ ಇಬ್ರಾಹಿಂ ಹಾಗೂ ಗೌತಮ್ ಅವರು ನೀಡಿದ ಮಾಹಿತಿ ಆಧರಿಸಿ ತಮಿಳುನಾಡು ಮೂಲದ ನಾಲ್ವರನ್ನು ವಶಕ್ಕೆ ಪಡೆಯಲಾಗಿತ್ತು. ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಲು ಬೇಕಾದ ಸಿಮ್ ಕಾರ್ಡ್ಗಳನ್ನು ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪಡೆದು ಕೊರಿಯರ್ ಮುಖಾಂತರ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ.ಈ ರೀತಿ ಇದುವರೆಗೂ ಎಷ್ಟು ಸಿಮ್ ಕಾರ್ಡ್ಗಳನ್ನು ಪಡೆಯಲಾಗಿದೆ, ಇದರಲ್ಲಿ ಇನ್ನುಳಿದ ಯಾರ್ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇವರು ಉಗ್ರಗಾಮಿಗಳ ಜೊತೆ ಸಂಪರ್ಕ ಹೊಂದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಹಿಂದೆ ಸುಮಾರು ಇಪತ್ತು ವರಷ್ಗಳ ಹಿಂದೆ ಇಂಥದ್ದೇ ಪ್ರಕರಣ ಉತ್ತರ ಕನ್ನಡದಲ್ಲಿ ನಡೆದು ಅದು ರಅಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕುಮಟಾ, ಶಿರಸಿ, ಭಟ್ಕಳದ ಗ್ರಮೀನ ಪ್ರದೇಶದಲ್ಲಿ ದೂರವಾಣಿ ಎಕ್ಸಚೇಂಜ್ ಬಳಸಿಕೊಂಡು ಈ ತರಹದ ಕೃತ್ಯ ನಡೆಸುತ್ತಿರುವವರ ಜಾಲ ಭೇದಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ