ಪೊಲೀಸ್ ಗೌರವಗಳೊಂದಿಗೆ ಇಂದು ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ ಅಂತ್ಯಕ್ರಿಯೆ

ಚಿಕ್ಕಮಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನ್ನಡ ಚಲನಚಿತ್ರ ನಟ ಸಂಚಾರಿ ವಿಜಯ ಅವರ ಅಂತ್ಯ ಸಂಸ್ಕಾರ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಇಂದು (ಮಂಗಳವಾರ) ನಡೆಯಲಿದ್ದು, ಸಿದ್ಧತೆ ನಡೆಸಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ವಿಜಯ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರದ ನಡೆಯಲಿದೆ. ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನಡೆಯಲಿದ್ದು, ಅಂತಿಮ ವಿಧಿ ವಿಧಾನಗಳು ಕುಪ್ಪೂರು ಮಠದ ಮಠಾಧೀಶರ ನೇತೃತ್ವದಲ್ಲಿ ನಡೆಯಲಿದೆ.
ಪಂಚನಹಳ್ಳಿಗೆ ಬಂದಾಗ ಸಂಚಾರಿ ವಿಜಯ್ ಅವರು ಸ್ನೇಹಿತನ ಇದೇ ತೋಟದಲ್ಲಿ ಕಾಲ ಕಳೆಯುತ್ತಿದ್ದ ಕಾರಣಕ್ಕೆ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಯಲಿದೆ.
ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ , ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟ ಪಡಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಿಂದ ಪಂಚನಹಳ್ಳಿ ವರೆಗೆ..:
ನಟ ಸಂಚಾರಿ ವಿಜಯ್, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ 3.34 ಕ್ಕೆ ಮೃತಪಟ್ಟಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ಸ್ವಲ್ಪಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ನಂತರ ಸದ್ಯ ವಿಜಯ್ ಅವರ ಪಾರ್ಥೀವ ಶರೀರ ಆಂಬುಲೆನ್ಸ್ ಮೂಲಕ ಅವರ ಊರು ಪಂಚನಹಳ್ಳಿಗೆ ಶಿಫ್ಟ್ ಮಾಡಲಾಗುತ್ತಿದೆ.
ಅಂಗಾಂಗ ದಾನ ಮಾಡಿರುವ ಸಂಚಾರಿ ವಿಜಯ್ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನಡೆಸಲಾಗುವುದು ಎಂದು ತಿಳಿಸಿದ್ದು, ಅವರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement