ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಭಾರೀ ಮಳೆ

ಬೆಂಗಳೂರು: ಕರ್ನಾಟಕದಲ್ಲಿ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಖ್ಯವಾಗಿ ರಾಜ್ಯದ ಕರಾವಳಿ ಪ್ರದೇಶ ಮತ್ತು ಮಲೆನಾಡಿನಲ್ಲಿ ಎರಡು-ಮೂರು ದಿನಗಳಿಂದ ಎಡೆಬಿಡದಂತೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿದ ವರದಿಯಾಗಿದೆ.
ಕರ್ನಾಟಕದ ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಹಾಗೂ ಮಲೆನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 17ರ ವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ನೀರು ಹರಿದುಬರುತ್ತಿವೆ.
ಮಲೆನಾಡಿನ ಸಾಗರ, ತೀರ್ಥಹಳ್ಳಿ, ಹೊಸನಗರ, ಸಿದ್ಧಾಪುರ, ಶಿರಸಿ ತಾಲೂಕುಗಳಲ್ಲಿ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ 13,173 ಕ್ಯೂಸೆಕ್ಸ್ ನೀರು ಹರಿದುಬಂದಿದೆ.
ಜೂನ್ 17ರಿಂದ 19ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೂನ್ 18 ಮತ್ತು 19ರಂದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ನಿರೀಕ್ಷೆಯಿದೆ. ಭಾರೀ ಮಳೆ ನಿರೀಕ್ಷೆ ಇರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಿಂದ ಅನೇಕ ಮನೆ, ರಸ್ತೆಗಳು ಹಾನಿಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ.
ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಯಾದಿಗಿರಿ ಜಿಲ್ಲೆಗಳಿಗೆ ಬುಧವಾರ ಹಳದಿ ಅಲರ್ಟ್​ ಘೋಷಿಸಲಾಗಿದೆ.
ಅಂಕೋಲ, ಕಾರವಾರ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಶಿವಮೊಗ್ಗ, ಶಿರಸಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. . ಶಿವಮೊಗ್ಗದ ಹೊಸನಗರ, ಸಾಗರ, ತೀರ್ಥಹಳ್ಳಿ, ಚಿಕ್ಕಮಗಳೂರಿನ ಬಾಳೆಹೊನ್ನೂರು, ಕೊಪ್ಪ, ಕಳಸ, ಶೃಂಗೇರಿ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.
ಕೊಡಗಿನಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅನೇಕ ಮನೆಗಳಿಗೆ ನೀರು ನುಗ್ಗಿ ದೆ. ತೋಟಗಳಿಗೆ ಹಾನಿಯಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement