ಕೊನೆಗೂ ಕೈಕುಲುಕಿದ ಜೋ ಬಿಡೆನ್-ವ್ಲಾದಿಮಿರ್ ಪುಟಿನ್

ಜಿನೇವಾ: . ಎರಡೂ ದೇಶಗಳ ನಡುವಣ ಸಂಬಂಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಸ್ವಿಡ್ಜರ್​ಲೆಂಡ್​ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ.
ಅಮೆರಿಕ ಹಾಗೂ ರಷ್ಯಾ ಸಂಬಂಧಗಳು ಹದಗೆಟ್ಟ ಸಂದರ್ಭದಲ್ಲಿ ವಿಶ್ವದ ಇಬ್ಬರು ಪ್ರಭಾವಿ ನಾಯಕರ ಭೇಟಿ ಅಂತಾರಾಷ್ಟ್ರೀಯ ಮಹತ್ವ ಪಡೆದಿದೆ. ಸ್ವಿಡ್ಜರ್​ಲೆಂಡ್​ ಅಧ್ಯಕ್ಷ ಗಯ್ ಪರ್ಮೆಲಿನ್ ಇಬ್ಬರೂ ನಾಯಕರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು. ಅತಿಥಿ ಗೃಹ ಪ್ರವೇಶಿಸುವ ಮೊದಲು ಇಬ್ಬರೂ ನಾಯಕರು ಕ್ಯಾಮೆರಾಮನ್​ಗಳ ಎದುರು ಕೆಲವೇ ಸೆಕೆಂಡುಗಳ ಹಸ್ತಲಾಘವ ಮಾಡಿದರು. ಸುಮಾರು ಐದು ಗಂಟೆಗಳ ಕಾಲ ಇವರಿಬ್ಬರ ನಡುವೆ ಮಾತುಕತೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಅನೇಕ ದಿನಗಳಿಂದ ಇವರಿಬ್ಬರ ನಡುವೆ ತೀಕ್ಷ್ಣ ಹೇಳಿಕೆಗಳ ವಿನಿಮಯವಾಗಿತ್ತು. ಅಮೆರಿಕದ ಹಿತಾಸಕ್ತಿಗಳ ಮೇಲೆ ನಡೆಯುತ್ತಿರುವ ಸೈಬರ್ ದಾಳಿಗಳಲ್ಲಿ ರಷ್ಯಾ ಮೂಲದ ಹ್ಯಾಕರ್​ಗಳ ಕೈವಾಡವಿದೆ ಎಂದು ಬಿಡೆನ್‌ ಆರೋಪಿಸಿದ್ದರು. ರಷ್ಯಾದ ವಿರೋಧಪಕ್ಷದ ಹಿರಿಯ ನಾಯಕನ ಬಂಧನ ಮತ್ತು ಅಮೆರಿಕ ಚುನಾವಣೆಗಳಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆಯೂ ಅಮೆರಿಕ ಅಧ್ಯಕ್ಷರು ಪುಟಿನ್‌ ವಿರುದ್ಧ ಹರಿಹಾಯ್ದಿದ್ದರು.
ಪುಟಿನ್ ಅಮೆರಿಕದ ಕ್ಯಾಪಿಟಲ್ (ಸಂಸತ್ ಭವನ) ಹಿಂಸಾಚಾರವನ್ನು ಉಲ್ಲೇಖಿಸಿ ಅಮೆರಿಕದ ಸಿದ್ಧಾಂತಗಳು ಮತ್ತು ಗುಪ್ತಚರ ವೈಫಲ್ಯ ಉಲ್ಲೇಖಿಸಿ ತಮ್ಮ ದೇಶದಲ್ಲಿಯೇ ಶಾಂತಿ ಕಾಪಾಡಲು ಸಾಧ್ಯವಾಗದ ಅಮೆರಿಕಕ್ಕೆ ರಷ್ಯಾದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸುವ ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದರು.
ಬಿಡೆನ್‌ ಅಮೆರಿಕದ ಅಧ್ಯಕ್ಷರಾದ ನಂತರ ಎರಡೂ ಪ್ರಬಲ ದೇಶಗಳ ಉನ್ನತ ನಾಯಕರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಈಚೆಗೆ ಜೋ ಬಿಡೆನ್ ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಈ ಹೇಳಿಕೆಗಳ ಬಗ್ಗೆ ತುಸು ಭರವಸೆ ಇದ್ದಂತೆ ಭಾಸವಾಗುತ್ತದೆ. ಅಮೆರಿಕದ ಅತಿದೊಡ್ಡ ಟೀಕಾಕಾರನ ಭೇಟಿಯಿಂದ ಪರಿಸ್ಥಿತಿ ಒಂದೇ ಸಲಕ್ಕೆ ಬದಲಾಗುವುದಿಲ್ಲ ಎಂಬ ಬಗ್ಗೆಯೂ ಬಿಡೆನ್ ಅವರಿಗೆ ಸ್ಪಷ್ಟತೆ ಇದೆ. ಎರಡೂ ದೇಶಗಳ ಪರಸ್ಪರ ಹಿತಾಸಕ್ತಿ, ವಿಶ್ವದ ಒಳಿತಿಗಾಗಿ ಕೆಲವು ವಿಚಾರಗಳಲ್ಲಿಯಾದರೂ ಸಹಕರಿಸುವುದು ಅನಿವಾರ್ಯ. ನಾವು ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವೇ ಪ್ರಯತ್ನಿಸುತ್ತೇವೆ ಎಂದು ಜೋ ಬಿಡೆನ್ ಕೆಲ ದಿನಗಳ ಹಿಂದೆ ವಾಷಿಂಗ್​ಟನ್​ನಲ್ಲಿ ವರದಿಗಾರರ ಜೊತೆಗೆ ಮಾತನಾಡುವಾಗ ತಿಳಿಸಿದ್ದರು.
ಎರಡೂ ದೇಶಗಳ ಉನ್ನತ ನಾಯಕರು ಪರಸ್ಪರ ಭೇಟಿಯಾಗಲು ಮತ್ತು ಕೆಲ ವಿಷಯಗಳ ಬಗ್ಗೆ ಚರ್ಚಿಸಲು ಸಮ್ಮತಿಸಿರುವುದೇ ಒಂದು ಸಕಾರಾತ್ಮಕ ಬೆಳವಣಿಗೆ ಎಂಬ ಕೆಲವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement