ಕರ್ನಾಟಕ ಅನ್ಲಾಕ್‌ 2.0: ಮಾಲ್, ಹೊಟೇಲ್‌, ಕಲ್ಯಾಣಮಂಟಪ ಆರಂಭಕ್ಕೆ ಹಸಿರು ನಿಶಾನೆ.. ಷರತ್ತುಗಳು ಅನ್ವಯಿಸುತ್ತವೆ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದು, ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಕೆಲವೊಂದು ಆರ್ಥಿಕ ಚಟುವಟಿಕೆಗಳನ್ನು ಜೂ.21ರಿಂದ ಹಂತಹಂತವಾಗಿ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಜೂನ್ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ಜಾಥಾ. ಸಮಾವೇಶ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಬೇಕು.  ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ತಗ್ಗುತ್ತಿರುವ ಹಿನ್ನೆಲೆ, ಮಾಲ್​ಗಳು, ಶಾಪಿಂಗ್​ ಮಾಲ್​ಗಳು, ಮಾರುಕಟ್ಟೆಗಳನ್ನು ಕೆಲವು ಷರತ್ತಿನ ಮೇಲೆ ರೆಯಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಲಹೆ ನೀಡಿದೆ.  ಜೂ.21ರಿಂದ 2ನೇ ಹಂತದ ಅನ್‍ಲಾಕ್ ಆರಂಭವಾಗಲಿದ್ದು, ಜುಲೈ 5 ರಿಂದ ಮೂರನೇ ಹಂತದ ಅನ್‍ಲಾಕ್ ಆರಂಭವಾಗಲಿದೆ.
ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಸಭೆ ನಡೆಸಿದ್ದು, ಸಭೆಯಲ್ಲಿ ಅನ್ಲಾಕ್ 2 ಹಂತದಲ್ಲಿ ರೆಸ್ಟೋರೆಂಟ್, ಮಾಲ್, ಸಲೂನ್, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು. ಆದರೆ, ಶೇ.50ರಷ್ಟು ಜನರು ಸೇರುವಂತೆ ಸೂಚಿಸಬೇಕು. ಅಲ್ಲದೆ, ಅನ್ಲಾಕ್ 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರಬೇಕು ಎಂದು ಸೂಚಿಸಿದೆ.
ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಮತ್ತೆ ಹರಡಲಿದ್ದು, ಎರಡು ಅನ್ಲಾಕ್‌ ನಡುವೆ 2 ವಾರಗಳ ಅಂತರ ಇರಬೇಕೆಂದು ಸರ್ಕಾರಕ್ಕೆ ತಿಳಿಸಿದೆ. ಅನ್ಲಾಕ್ 3.0ಗೂ ಮೊದಲೂ ಆಕ್ಸಿಜನ್ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕೆಂದು ಸೂಚಿಸಿದೆ.
ಶಾಲಾ ಕಾಲೇಜುಗಳು ಪುನರಾರಂಭ ಕುರಿತು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ. ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸದೇ ಹೋದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ. ಮಾಲ್, ಶಾಪಿಂಗ್ ಮಾಲ್ ಹಾಗೂ ಮಾರುಕಟ್ಟೆಗಳನ್ನು ತೆರೆಯುವ ಕುರಿತು ಮರುಚಿಂತನೆ ನಡೆಸಬೇಕು. ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದ್ದರೆ ಮಾತ್ರ ಇವುಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದೆ.
ಪರಿಸ್ಥಿತಿಗೆ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಬೇಕು. ಅನ್‍ಲಾಕ್ 3ನೇ ಹಂತದಲ್ಲಿ ಜಿಮ್, ಯೋಗ ಕೇಂದ್ರ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರಗಳು, ಸ್ಪೋಟ್ಸ್‌ ಕ್ಲಬ್, ಕ್ಲಬ್ ಹೌಸ್, ಸಾರ್ವಜನಿಕ ಶೌಚಾಲಯ ಆರಂಭಿಸಬಹುದು ಎಂದು ಹೇಳಿದೆ.
ಎರಡನೇ ಹಂತದ ಅನ್‍ಲಾಕ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಹಾಗೂ ಧಾರ್ಮಿಕ ಕ್ಷೇತ್ರಗಳ ತೆರೆಯಲು ಚಿಂತನೆಗಳು ನಡೆಯುತ್ತಿದ್ದು, ಈ ಕುರಿತು ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರ ಅಭಿಪ್ರಾಯದ ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆ ನಡೆದಿದೆ.
ನಗರದಲ್ಲಿ ಕೊರೋನಾ ವೈರಸ್ ಹಾವಳಿ ಸಂಪೂರ್ಣವಾಗಿ ನಿಂತಿಲ್ಲ ಈ ಕಾರಣದಿಂದ ಶೇ.100 ಸಾರಿಗೆ ವ್ಯವಸ್ಥೆ ಸದ್ಯಕ್ಕೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕೆ ಮಾರುಕಟ್ಟೆಯನ್ನು ಈಗಲೇ ತೆರೆಯುವ ಚಿಂತನೆಗಳಿಲ್ಲ. ಮಾಲ್, ಚಿತ್ರಮಂದಿರ, ಜಿಮ್ ತೆರೆಯುವ ಕುರಿತು ನಿರ್ಧಾರ ಕೂಡ ಚರ್ಚೆಯಲ್ಲಿದೆ. ಧಾರ್ಮಿಕ ಪ್ರದೇಶಗಳಲ್ಲೂ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದೆ. ಹೀಗಾಗಿ ಸರ್ಕಾರ ಈ ಕುರಿತು ಚಿಂತನೆ ನಡೆಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದೆ.
ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಆದರೆ ಮತ್ತೆ ಸೋಂಕು ಹರಡದಂತೆ ಮಾಡಲು ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ. ಜೂ.21ಕ್ಕೂ ಮುನ್ನ ನಿರ್ಬಂಧಗಳನ್ನು ಸಡಿಲಿಕೆ ಮಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಆದಾಯ ಪ್ರಮಾಣಪತ್ರ ಪ್ರಕರಣ : ಸುಮಾ ಸಾಹುಕಾರಗೆ ಹೈಕೋರ್ಟ್ ತರಾಟೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement